ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ, ಮನುಷ್ಯ ಆರೋಗ್ಯವಂತನಾಗಿದ್ದಾನೆ ಎಂದರೆ ಅವನಷ್ಟು ಶ್ರೀಮಂತ ಯಾರೂ ಇಲ್ಲ. ದೈಹಿಕವಾಗಿ, ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಸದೃಢರಾಗಿರಲು ಯೋಗ ಸಹಕಾರಿಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ದಿನಚರಿಯ ಅಂಗವಾಗಿ ಯೋಗಾಭ್ಯಾಸವನ್ನು ಮಾಡಬೇಕು. ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದಿಡಲು ಯೋಗ ಉಪಯುಕ್ತವಾಗಿದ್ದು, ಆತ್ಮವನ್ನು ಪರಮಾತ್ಮನೊಂದಿಗೆ ಲೀನ ಮಾಡುವಲ್ಲಿ ಯೋಗ ಉತ್ತಮ ಔಷಧ ಎಂದು ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಕೋಟೇಶ್ವರ ಹೇಳಿದರು.
ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವದ ಸುವರ್ಣ ಸಂಭ್ರಮ-2024ರ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಆಯೋಜಿಸಲಾಗಿರುವ ಹತ್ತು ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿಯ ವೈದ್ಯ ಡಾ. ಮಹೇಶ ಜಿ. ಮಾತನಾಡಿ, ಯೋಗಾಭ್ಯಾಸ ಮಾಡುವುದರಿಂದ ದೇಹದಲ್ಲಿ ಚೈತನ್ಯ ವೃದ್ಧಿಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ. ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಎಲ್ಲಾ ರೋಗಗಳು ದೂರವಾಗಿ ಆರೋಗ್ಯದಿಂದಿರಲು ಸಾಧ್ಯ ಎಂದರು.
ಗಂಗೊಳ್ಳಿ ಶ್ರೀ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಆರ್ಕಾಟಿ ಶಿಬಿರವನ್ನು ಉದ್ಘಾಟಿಸಿದರು. ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ ಮತ್ತು ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ. ಗೋಪಾಲ ಪೂಜಾರಿ ಶುಭಾಶಂಸನೆಗೈದರು. ಅಂಬೇಡ್ಕರ ಯುವಕ ಮಂಡಲದ ಅಧ್ಯಕ್ಷ ನಾಗೇಶ, ಯೋಗ ತರಬೇತುದಾರೆ ರೂಪಾ ಬಾಬು ಪೈ, ಪ್ರಧಾನ ಅರ್ಚಕ ಜಿ. ರಾಘವೇಂದ್ರ ಆಚಾರ್ಯ, ಸಮಿತಿಯ ಖಜಾಂಚಿ ನಾರಾಯಣ ಪೂಜಾರಿ, ಮಹಿಳಾ ಸಮಿತಿ ಕಾರ್ಯದರ್ಶಿ ಸುಜಾತ ಬಾಬು ಖಾರ್ವಿ ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ ವಂದಿಸಿದರು.