ಕುಂದಾಪು ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ಜುಲೈ 1 ರಂದು ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಅವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಬಿಡುಗಡೆಗೊಂಡಿರುವ ಪುಸ್ತಕಗಳೆಂದರೆ ನರೇಂದ್ರ ಪೈ ಆಯ್ದ ವಿಮರ್ಶೆಗಳನ್ನು ಒಳಗೊಂಡ ಸಾವಿರದ ಒಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು ಎಂಬ ಕಥಾಸಂಕಲನ, ಸುಧಾ ನಾಗೇಶ್ ಅವರ ಹೊಂಬೆಳಕು ಎಂಬ ಚಿಂತನ ಬರಹಗಳು, ವಾಣಿ ರಾಜ್ ಅವರ ಕಥಾಸಂಕಲನ ಸವಿ ನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ ಕುಂದೂರು ಅವರ ಮಲೆನಾಡಿನ ಕಥನವಾದ ಜೀವನ ಯಾನ, ರಾಜೇಂದ್ರ ಭಟ್ ಅವರ ರಾಜ ಪಥ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ಅವರ ಕೊಂದು ಪಾಪ ತಿಂದ್ ಪರಿಹಾರ ಎಂಬ ಕಥಾ ಪ್ರಸಂಗಗಳು, ರಾಜಶೇಖರ ಹಳೆ ಮನೆ ಅವರ ಕಾದಂಬರಿ ಒಡಲುಗೊಂಡವರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಅವರ ಅರಿವಿನ ದಾರಿ ಎಂಬ ಲೇಖನಗಳ ಪುಸ್ತಕ, ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ. ರಾವ್ ಅವರ ನಗುವ ನಯನ ಮಧುರ ಮೌನ ಎಂಬ ಕಾದಂಬರಿ, ರಾಮಕೃಷ್ಣ ಹೆಗಡೆ ಅವರ ಒಲವಧಾರೆ ಎಂಬ ಕವನ ಸಂಕಲನ, ಲಲಿತಾ ಮುದ್ರಾಡಿ ಅವರ ಕವನ ಸಂಕಲನ ಅರ್ಥವಾಗದವರು, ಲಕ್ಷ್ಮಣ್ ಬಜಿಲರ ಕವನ ಸಂಕಲನ ನಿರ್ವಾಣ, ಮಹೇಶ್ ಪುತ್ತೂರು ಅವರ ಕಾದಂಬರಿ ವರ್ಣ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ರಾವ್ ಹತ್ವಾರ ಅವರು ಶಿಕ್ಷಣ ಇರುವುದು ಸಂಪಾದನೆಗೆ, ಓದು ಇರುವುದು ಸಂತೋಷಕ್ಕೆ ಎಂದು ಹೇಳುತ್ತಾ ಪುಸ್ತಕದಿಂದ ಭಾವ ಜಗತ್ತು ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದರು.
ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ ಹೊಸತನವಿರದ ವ್ಯಕ್ತಿ ಪರಿಪೂರ್ಣನಲ್ಲ. ವ್ಯಕ್ತಿ ಪರಿಪೂರ್ಣವಾಗಬೇಕಾದರೆ ಪುಸ್ತಕಗಳ ಓದು ಅವಶ್ಯಕತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಪ್ತ ಸಂಸ್ಥಾಪಕರು, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಅವರು ಲೇಖಕರ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.