Kundapra.com ಕುಂದಾಪ್ರ ಡಾಟ್ ಕಾಂ

ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಹಬ್ಬ. ಆಗಸ್ಟ್ 17-18ರಂದು ಆಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ಕುಂದಗನ್ನಡಿಗರು ಭಾಷೆ – ಬದುಕಿನ ಮೇಲಿನ ಅಭಿಮಾನದಿಂದ ಆಚರಿಸಲಾಗುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ದಿನವನ್ನು, ಈ ಭಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ. ರಾಜಧಾನಿಯಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

‘ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು’ ಆಯೋಜಿಸಲಾಗುತ್ತಿರುವ ಕುಂದಾಪ್ರ ಕನ್ನಡ ಹಬ್ಬದ ದಿನ-ಸ್ಥಳ ಘೋಷಣಾ ʼವಾಲ್ಗʼ ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡ ಹಬ್ಬದ ವಿವರಗಳನ್ನು ನೀಡಲಾಯಿತು. ಆರು ವರ್ಷಗಳ ಹಿಂದೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆರಂಭವಾಗಿದ್ದು, ‘ಕುಂದಾಪ್ರ ಕನ್ನಡ ಪ್ರತಿಷ್ಠಾನವು ಐದನೇ ವಿಶ್ವ ಕುಂದಾಪುರ ಕನ್ನಡ ಹಬ್ಬವನ್ನು ಆಚರಿಸುತ್ತಿದೆ.

ಥೀಮ್ ಸಾಂಗ್ ಪೋಸ್ಟರ್ ಅನಾವರಣ:
ಕುಂದಾಪ್ರ ಕನ್ನಡ ಹಬ್ಬಕ್ಕೆ ಪೂರ್ವಭಾವಿಯಾಗಿ ಇಂದು ಥೀಮ್ ಸಾಂಗ್ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು.

ಉದ್ಘಾಟಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತಾಡಿ, ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವುರು ಶ್ರಮಿಸುತ್ತಿದ್ದಾರೆ. ಸದಾ ಈ ಪ್ರಯತ್ನಕ್ಕೆ ನನ್ನ ಬೆಂಬಲ ಇರಲಿದೆ. ಕುಂದಾಪುರ ಸಂಸ್ಕ್ರತಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುತ್ತಿದ್ದು, ಕುಂದಾಪುರ ಹಬ್ಬದಲ್ಲಿ ಅದನ್ನ ರಿವೀಲ್ ಮಾಡೋದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಸತೀಶ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ನರಸಿಂಹ ಬೀಜಾಡಿ, ಅಜಿತ್ ಶೆಟ್ಟಿ ಉಳ್ತೂರು, ಉದಯ್ ಹೆಗ್ಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬೃಹತ್ ಮೆರವಣಿಗೆ: ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ.

ಕುಂದಾಪ್ರ ಕನ್ನಡ ಹಬ್ಬದ ವಿಶೇಷತೆಗಳು
ಬೆಂಗಳೂರಿನ ಹಲವು ಏರಿಯಾಗಳಿಂದ ಪುರವಣಿಗೆಯೊಂದಿಗೆ ದಿಬ್ಬಣವು ಅರಮನೆ ಮೈದಾನಕ್ಕೆ ಬರಲಿದೆ.ಬಳಿಕ ನುಡಿ ಚಾವುಡಿಯ ಮೂಲಕ ಅಗಸ್ಟ್ 17ರ ಶನಿವಾರ ಮಧ್ಯಾನ್ನ ಉದ್ಘಾಟನಾ ಕಾರ್ಯಕ್ರಮ ಇರಲಿದ್ದು ಚಿತ್ರ ತಾರೆಯರು, ಗಣ್ಯರು ಉಪಸ್ಥಿತರಿರಲಿದ್ದಾರೆ. ಕುಂದಾಪುರ ಕನ್ನಡ ಹಬ್ಬದಲ್ಲಿ ಬೆಂಗಳೂರಿನಲ್ಲಿ ಅತಿದೊಡ್ಡ ಐತಿಹಾಸಿಕ ಜೋಡಾಟ ಯಕ್ಷಗಾನ, ಹಂದಾಡಿ ಮತ್ತು ತಂಡದ ಹಂದಾಡ್ತಾ ನೆಗ್ಯಾಡಿಯ ವಿಭಿನ್ನ ನಗೆನಾಟಕ, ಕುಂದಾಪುರದ ಗ್ರಾಮೀಣ ಕ್ರೀಡೆಗಳನ್ನ ಒಳಗೊಂಡ ಬಯಲಾಟ ರಥೋತ್ಸವ, ಆಫ್ರಿಕಾದ ಜಂಬೆ- ಕುಂದಾಪುರದ ಚಂಡೆಯ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಆಫ್ರಿಕಾ- ಕುಂದಾಪುರ ಕಲಾ ಸಮಾಗಮ, ಭುಭಬಲದ ಪರಾಕ್ರಮ ಎಂಬ ಹಗ್ಗ ಜಗ್ಗಾಟ ಸ್ಪರ್ಧೆ,ಯುವಕ-ಯುವತಿಯರಿಗಾಗಿ ಕುಂದಾಪುರ ಕನ್ನಡ ಡಿಜೆ,ಕುಂದಗೀತೆಗಳ ಡಾನ್ಸ್ ಕುಂದಾಪುರ ಡಾನ್ಸ್, ಕುಂದಾಪುರ ಕನ್ನಡ ಚಿತ್ರ ಪ್ರದರ್ಶನ,ಕುಂದಾಪುರ ನೆಲಮೂಲದ ಸಿನಿ ತಾರಾ ಮೆರಗು,ಕಡಲೂರಿನ ವಸ್ತು,ಒಡವೆ, ವಸ್ತ್ರ ಮೊದಲಾದವುಗಳ ಪ್ರದರ್ಶನ, ಮಾರಾಟ, ಕರಾವಳಿ ಖಾದ್ಯ ಮೇಳ ಸೇರಿ ಈ ಭಾರಿ ವೈವಿಧ್ಯಮಯ ಕಾರ್ಯಕ್ರಮಗಳು ಇರಲಿದೆ.

2 ದಿನಗಳ ಕಾರ್ಯಕ್ರಮ

* ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ. – ದೀಪಕ್ ಶೆಟ್ಟಿ ಬಾರ್ಕೂರು, ಅಧ್ಯಕ್ಷರು, ಕುಂದಾಪ್ರ ಕನ್ನಡ ಪ್ರತಿಷ್ಠಾನ

Exit mobile version