Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತ್‌ ಸಿಇಓ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯಿತಿಗೆ ಉಡುಪಿ ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬುಧವಾರ ಭೇಟಿ ನೀಡಿದರು.

ಕುಡಿಯುವ ನೀರಿನ ತಪಾಸಣೆ ಮಾಡಿದ ಅವರು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಅಪೂರ್ಣ ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನಚಂದ್ರ ಮತ್ತು ಸದಸ್ಯರಲ್ಲಿ ಚರ್ಚಿಸಿದರು ಹಾಗೂ ಗ್ರಾಮ ಪಂಚಾಯತ್ ಬಳಿ ಇರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರದ ಬಗ್ಗೆ ವಿಚಾರಿಸಿದರು.

ವಿಶೇಷವಾಗಿ ಪರಿಶಿಷ್ಟ ಪಂಗಡದ ಮಂಜಮ್ಮ ಅವರ ಮನೆಗೆ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಶಿಕ್ಷಣ ಇಲಾಖೆ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಎಲ್ಲರನ್ನು ಒಳಗೊಂಡ ಸಮಿತಿ ರಚನೆ ಮಾಡಿ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ಥಳ ವೀಕ್ಷಣೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ, ತಾಲೂಕು ಪಂಚಾಯತ್ ನಿರ್ವಹಣಾಧಿಕಾರಿ ಎನ್. ಭಾರತಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುದರ್ಶನ್, ಗ್ರಾಮ ಪಂಚಾಯಿತನ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

Exit mobile version