ಗಂಗೊಳ್ಳಿ: ದೇಶದ ಭದ್ರತೆ ದೃಷ್ಟಿಯಿಂದ ಕರಾವಳಿ ಕಾವಲು ಪೊಲೀಸ್ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಕರಾವಳಿ ತೀರ ಪ್ರದೇಶ ಹಾಗೂ ಬಂದರುಗಳ ಭದ್ರತೆ ಕರಾವಳಿ ಕಾವಲು ಪೊಲೀಸ್ ಪಡೆಯ ಮುಖ್ಯ ಉದ್ದೇಶವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಆರಂಭಗೊಂಡಿದ್ದು, ಇದೀಗ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಕರಾವಳಿ ಕಾವಲು ದೃಷ್ಟಿಯಿಂದ ಅಗತ್ಯವಿರುವ ಸ್ಪೀಡ್ ಬೋಟ್ ಠಾಣೆಗೆ ಬರಲಿದೆ ಅಲ್ಲದೆ ಸುಸಜ್ಜಿತ ಜೆಟ್ಟಿ ಕೂಡ ನಿರ್ಮಾಣಗೊಳ್ಳಲಿದೆ ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ ನಡಹಳ್ಳಿ ಹೇಳಿದರು.
ಅವರು ಗಂಗೊಳ್ಳಿಯ ಬಂದರು ಪ್ರದೇಶದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸಭೆಯಲ್ಲಿ ಮೀನುಗಾರರಿಗೆ ಮಾಹಿತಿ ನೀಡಿ ಮಾತನಾಡಿದರು. ಮೀನುಗಾರರು ಮೀನುಗಾರಿಕೆಗೆ ತೆರಳುವ ಸಂದರ್ಭ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು ಹಾಗೂ ಅಗತ್ಯ ಎಲ್ಲಾ ದಾಖಲೆ ಪತ್ರ ಮತ್ತು ಗುರುತಿನ ಚೀಟಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಎಲ್ಲಾ ದೋಣಿಯವರು ಒಟ್ಟಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಬಗ್ಗೆ ಯೋಚನೆ ನಡೆಸಬೇಕು ಎಂದು ಹೇಳಿದ ಅವರು ಸಮುದ್ರದಲ್ಲಿ ಮತ್ತು ತೀರ ಪ್ರದೇಶದಲ್ಲಿ ಸಂಸಯಾಸ್ಪದ ವ್ಯಕ್ತಿಗಳು, ಬೋಟುಗಳು, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ ಹಾಗೂ ಇತರೆ ಯಾವುದೇ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಸಮೀಪದ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನವನ್ನು ಇಲಾಖೆ ವತಿಯಿಂದ ನೀಡಲಾಗುವುದು ಎಂದರು.
ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಎಲ್ಲಾ ನಾಡದೋಣಿ ಮೀನುಗಾರರಿಗೆ ಕರಾವಳಿ ಕಾವಲು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯ ಕಾರ್ಡ್ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಚೌಕಿ ವಿಠಲ ಖಾರ್ವಿ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಎಸ್‌ಐ ಶೇಖ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಸಂಘದ ಮಾಜಿ ಅಧ್ಯಕ್ಷ ಚಂದ್ರ ಡಿ.ಖಾರ್ವಿ, ಉಪಾಧ್ಯಕ್ಷ ಮೋಹನ ಖಾರ್ವಿ, ಖಜಾಂಚಿ ಸಂಜೀವ ಪೂಜಾರಿ ಕೋಡಿ, ನಾಗೇಶ ಪುತ್ರನ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ನಾಗಪ್ಪಯ್ಯ ಪಟೇಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.