Site icon Kundapra.com ಕುಂದಾಪ್ರ ಡಾಟ್ ಕಾಂ

ನಾವು ಮಾಡುವ ಉತ್ತಮ ಕಾರ್ಯದ ಮೂಲಕ ಮಹಾನ್ ಎನ್ನಿಸಿಕೊಳ್ಳುತ್ತೇವೆ: ಡಾ. ಸೌಮ್ಯ ಮಣಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಸಮಾಜಕ್ಕೆ ಮಾಡುವ ಸೇವೆಯು ಬದುಕನ್ನು ಅವಿಸ್ಮರಣೀಯಗೊಳಿಸುತ್ತದೆ. ರೋಟರಿಯಿಂದ ರಚನಾತ್ಮಕ ಕೆಲಸಗಳ ಜೊತೆಗೆ ಈ ನೆಲ, ಜಲ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ಆಗಬೇಕಿದ್ದು, ಪ್ರತಿಯೋರ್ವ ರೋಟರಿ ಸದಸ್ಯರು ಇದರೊಂದಿಗೆ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಡಾ. ಸೌಮ್ಯ ಮಣಿ ಹೇಳಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆದ ಗಂಗೊಳ್ಳಿ ರೋಟರಿ ಕ್ಲಬ್‌ನ 2024-25ನೇ ಸಾಲಿನ ಪದ ಪ್ರದಾನ ಸಮಾರಂಭದಲ್ಲಿ ರೋಟರಿ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ಮಹಾನ್ ವ್ಯಕ್ತಿಗಳು ಎಂದೆನ್ನಿಸಿಕೊಂಡವರು ಕೇವಲ ಬದುಕಲಿಲ್ಲ. ಬದಲಿಗೆ ಇತಿಹಾಸ ಸೃಷ್ಟಿಸಿ ಹೋದರು. ನಾವು ಮಾಡುವ ಉತ್ತಮ ಕಾರ್ಯದ ಮೂಲಕ ಮಹಾನ್ ಎನ್ನಿಸಿಕೊಳ್ಳುತ್ತೇವೆ. ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಸಮಷ್ಟಿ ಪ್ರಜ್ಞೆ ಬೆಳೆದರೆ ಗೆಲುವಿನ ಸಾರಿ ಸುಗಮವಾಗುವುದು ಎಂದರು.

ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷೆ ಚಂದ್ರಕಲಾ ಎಸ್. ತಾಂಡೇಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ವಲಯ-1ರ ಸಹಾಯಕ ಗವರ್ನರ್ ಡಾ. ರಾಜೇಂದ್ರ ಶೆಟ್ಟಿ ಕ್ಲಬ್‌ನ ಬುಲೆಟಿನ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರೋಟರಿ ವಲಯ ಸೇನಾನಿ ಪ್ರದೀಪ್ ಡಿ. ಕೆ. ಉಪಸ್ಥಿತರಿದ್ದರು.

ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಮಧ್ಯಾಹ್ನದೂಟದ ಯೋಜನೆಗೆ ನೆರವು ನೀಡಲಾಯಿತು.

ನಿರ್ಗಮನ ಅಧ್ಯಕ್ಷ ಎಂ. ನಾಗೇಂದ್ರ ಪೈ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಕೃಷ್ಣ ಪೂಜಾರಿ ಹಿಂದಿನ ಸಾಲಿನ ಕಾರ್ಯಚಟುವಟಿಕೆಗಳ ವರದಿ ಮಾಚಿಸಿದರು. ಕೆ. ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವಂದಿಸಿದರು.

Exit mobile version