ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗಾಣಿಗ ಪ್ರತಿಷ್ಠಾನ ರಿ. ಬೈಂದೂರು ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ಬೈಂದೂರು ವತ್ತಿನಕಟ್ಟೆಯ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಪರಮೇಶ್ವರ ಗಾಣಿಗ ಉದ್ಘಾಟಿಸಿ, ಗಾಣಿಗ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಗಾಣಿಗ ಪ್ರತಿಷ್ಠಾನದ ಮೂಲಕ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕೊಲ್ಲೂರು ರಮೇಶ ಗಾಣಿಗರ ನೇತೃತ್ವದಲ್ಲಿ ಸಮಾಜಕ್ಕೆ ಸ್ಪಂದಿಸುತ್ತಾ ಗಾಣಿಗ ಪ್ರತಿಷ್ಠಾನ ಮುನ್ನೆಡೆಯುತ್ತಿರುವುದು ಸಂತಷದ ವಿಚಾರ ಎಂದರು.
ಗಾಣಿಗ ಪ್ರತಿಷ್ಠಾನ ಬೈಂದೂರು ಅಧ್ಯಕ್ಷರಾದ ರಮೇಶ ಗಾಣಿಗ ಕೊಲ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಏಳ್ಗೆಯಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಅವರ ಪ್ರತಿಭಾ ಪುರಸ್ಕಾರ ಮಾಡಿದಾಗ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಬೈಂದೂರು ಗಾಣಿಗ ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿ ವಿತರಣೆ, ಹೊಲಿಗೆ ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಹಾಗೆಯೇ ಬಹಳ ಮುಖ್ಯವಾಗಿ ಬೈಂದೂರಿನ ಗೋಪಿನಾಥ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆ. ಇದಕ್ಕೂ ಸಮಾಜ ಬಾಂಧವರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾದ ಸತೀಶ್ ಗಾಣಿಗ ಎರಡನೇ ಹಂತದ ಹೊಲಿಗೆ ತರಬೇತಿ ಉದ್ಘಾಟಿಸಿದರು. ಬೈಂದೂರು ವಿಘ್ನೇಶ್ ಕ್ಲೀನಿಕ್ ವೈದ್ಯರಾದ ಡಾ| ಸರಸ್ವತಿ ಬಾಲಕೃಷ್ಣ ಗಾಣಿಗ ಕಲಿಕಾ ಸಾಮಗ್ರಿ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ಉಪ್ಪುಂದ ಪಿ. ಎನ್. ಶ್ರೀಧರ, ಕೆ. ಆರ್. ಎಸ್. ಎಸ್. ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಗಣಪಯ್ಯ ಗಾಣಿಗ ಬಾಯಂಹಿತ್ಲು, ಉಪ್ಪುಂದ ಎಸ್. ವಿ. ಎಂ. ಎಸ್. ಅದರ ಮಾಲಿಕರಾದ ಶಿವಾನಂದ ಗಾಣಿಗ, ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ ತಗ್ಗರ್ಸೆ, ನಿವೃತ್ತ ಮುಖ್ಯೋಪಾಧ್ಯಾಯರಾದ ಪುಟ್ಟಯ್ಯ ಗಾಣಿಗ ಕುಂದಬಾರಂದಡಿ, ನಿವೃತ್ತ ಬ್ಯಾಂಕ್ ಅಧಿಕಾರಿ ಸೀತಾರಾಮ ಗಾಣಿಗ, ಪ್ರೇಮ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಪುಟ್ಟಯ್ಯ ಗಾಣಿಗ ಕುಂದಬಾರಂದಡಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡಲಾಯಿತು.
ಸತ್ಯನಾರಾಯಣ ಗಾಣಿಗ ಪ್ರಾರ್ಥನೆ ಮಾಡಿದರು. ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು ಸ್ವಾಗತಿಸಿದರು. ಗಾಣಿಗ ಪ್ರತಿಷ್ಠಾನದ ಕೋಶಾಧಿಕಾರಿ ಆನಂದ ಗಾಣಿಗ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಾ ಪುರಸ್ಕಾರ ಸಮಿತಿಯ ಶಿವಾನಂದ ಗಾಣಿಗ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸುಮನಾ ಪಡುಕೋಣೆ ಕಲಿಕಾ ಸಾಮಗ್ರಿ ಪಡೆಯುವ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಗಾಣಿಗ ಪ್ರತಿಷ್ಠಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬೈಂದೂರು ವಂದಿಸಿದರು.