Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅಪೌಪ್ಠಿಕತೆಯ ಕುರಿತು ಮಾಹಿತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ, ಪಿ.ಜಿ.ಡಿ.ಎಚ್.ಪಿ.ಇ ವಿಭಾಗ  ಬೆಂಗಳೂರು, ತಾಲೂಕು ಆರೋಗ್ಯ ಅಧಿಕಾರಿ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರ , ರೋಟರಿ ಕ್ಲಬ್ ಕೋಟೇಶ್ವರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬಡಾಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಹೊಸಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 0-6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅಪೌಪ್ಠಿಕತೆಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ .ಪಿ ಗಡಾದ್ ಉದ್ಘಾಟಿಸಿದರು.

ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ ಹಣ್ಣುಗಳನ್ನು ಸೇರಿಸುವುದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ .ಉಪನ್ಯಾಸಕ ಡಾ. ಮಂಜುನಾಥ್ ಜೆ .ಎ ಮಾತನಾಡಿ,  ಪಿ.ಜಿ.ಡಿ.ಎಚ್.ಪಿ.ಇ 7ನೇ ತಂಡದ ಪ್ರಶಿಕ್ಷಣಾರ್ಥಿ ವೃಂದಾ. ಬಿ. ತಾಮಸೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಅಪೌಷ್ಟಿಕತೆಯ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಗ್ರಾಮದ ಎಲ್ಲಾ ಮಕ್ಕಳು ಮತ್ತು ತಾಯಂದಿರನ್ನು ಬೃಹತ್ ಮಹಾ ಮೇಳದ ಮೂಲಕ ಈ ಸಭಾಂಗಣದ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ ಹಾಗೂ ಈ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ರೋಟರಿ ಕ್ಲಬ್ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಶುಭ ಹಾರೈಸಿದರು.

ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಟಿ. ಎಂ. ಮಾತನಾಡಿ,  ಅಂಗನವಾಡಿಗಳ ಮೂಲಕ ಅಪೌಷ್ಟಿಕ ಮಕ್ಕಳ ದತ್ತು ಪಡೆಯುವ ಯೋಜನೆಯನ್ನು ಅಗತ್ಯತೆ ಇರುವ ಕುಟುಂಬಗಳು ಪಡೆದುಕೊಳ್ಳಬೇಕು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಷ್ಟ್ರಧ್ವಜದ ತ್ರಿವರಣವುಳ್ಳ ಹಣ್ಣು ಹಂಪಲು ತರಕಾರಿ ಸೊಪ್ಪು ಬೇಳೆ ಕಾಳುಗಳು ಹಾಲು ಮೊಟ್ಟೆ ಮೀನು ಮಾಂಸ ಹೀಗೆ ಸಮತೋಲನ ಆಹಾರವನ್ನು ರೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಮಾತನಾಡಿ,  ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಡ್ರೈಡೇ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಕರಗಳನ್ನು ಸಂಪೂರ್ಣ ಖಾಲಿ ಮಾಡಿ ಹೊಸದಾಗಿ ನೀರನ್ನು ತುಂಬಿಸಿಕೊಳ್ಳಬೇಕು ಎಂದರು.

ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ.ಕೆ ಉಪನ್ಯಾಸ ನೀಡಿ,  ಮಕ್ಕಳ ದೈಹಿಕ ಬೆಳವಣಿಗೆಗಾಗಿ ಅಪೌಷ್ಟಿಕತೆ ಪ್ರಮಾಣ ತಿಳಿಯಲು ಮೌಲ್ಯಮಾಪನ ಮಾಡಬೇಕಾಗುತ್ತದೆ ತೋಳಿನ ಮಧ್ಯಭಾಗದ ಸುತ್ತಳತೆ 11.5 ಛಿm ಗಿಂತ ಕಡಿಮೆ ಇರುವ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಅವರಿಗೆ ಹೆಚ್ಚಿನ ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಅವಶ್ಯಕತೆ ಇದೆ. ಅಪೌಷ್ಟಿಕತೆಯು ದೇಹದ ಪ್ರಮುಖ ಅಂಗಗಳ ಕಾರ್ಯಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ  ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪೌಷ್ಟಿಕ ಸಮತೋಲಿತ ಆಹಾರವನ್ನು ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯ ತಾಯಂದಿರಿಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಜ್ಞಾನ ಹೆಚ್ಚಿದ್ದು, ಆದರೆ ಕಾರ್ಯರೂಪಕ್ಕೆ ತರುವಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಇನ್ನೂ ಆಗಿಲ್ಲ ಅದಕ್ಕಾಗಿ ನಾವೆಲ್ಲರೂ ಅಪೌಷ್ಟಿಕತೆ ವಿರುದ್ಧ ಹೋರಾಡಲು ಇಲ್ಲಿ ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗಿರುವ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರೂಡಿಸಿಕೊಳ್ಳುವುದರೊಂದಿಗೆ ಕಾರ್ಯರೂಪಕ್ಕೆ ತರೋಣ ಎಂದು ತಮ್ಮ ಅಮೂಲ್ಯವಾದ ಮಾಹಿತಿಯಲ್ಲಿ  ತಿಳಿಸುತ್ತಾ 0-19 ವರ್ಷದ ಒಳಗಿನ ಮಕ್ಕಳಿಗಾಗಿ ಸರ್ಕಾರದಿಂದ ಜಾರಿ ಇರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರತ್ನ, ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳ ಪಡೆಯುವವರ ಸಂಖ್ಯೆ ಅಧಿಕವಾಗಿದ್ದು ಈ ಮಕ್ಕಳ ಪಾಲನೆ ಪೋಷಣೆಗೆ ಎಲ್ಲಾ ಇಲಾಖೆಯವರು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ಕೇವಲ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವುದಲ್ಲದೆ ತಾಯಂದಿರು ಕೂಡ ಸಮತೋಲಿತ ಪೌಷ್ಟಿಕ ಆಹಾರವನ್ನು ಗರ್ಭಿಣಿ ಅವಧಿಯಲ್ಲಿಯೇ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. 

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಆರ್ ಶೇಟ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿಗಳು ಡಾ.ಜೋತ್ನಾ ಸ್ಥಳೀಯ ಗ್ರಾಮ ಪಂಚಾಯತ್‌ನ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯಕ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆಭಾಕಾರ್ಡ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಮಾಡಲಾಯಿತು.

ವೃಂದಾ. ಬಿ. ತಾಮಸೆ ಪ್ರಶಿಕ್ಷಣಾರ್ಥಿ ಪಿ.ಪಿ.ಜಿ.ಡಿ.ಎಚ್.ಪಿ.ಇ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.

Exit mobile version