ಬೈಂದೂರು: ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಜನರಿಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ದೂರದ ಆಸ್ಪತ್ರೆಗಳಗೆ ಹೋಗಲು ಅನಾನುಕೂಲತೆಯಿಂದ ಕಷ್ಟಸಾಧ್ಯ. ಹೀಗಾಗಿ ಆಯಾ ಹಳ್ಳಿಯಲ್ಲಿರುವ ಸಂಘ-ಸಂಸ್ಥೆಗಳು ಆರೋಗ್ಯ ಶಿಬಿರಗಳ ಮೂಲಕ ತಜ್ಞವೈದ್ಯರನ್ನು ಹಳ್ಳಿಗೆ ಕರೆಯಿಸಿ ಚಿಕಿತ್ಸೆ ಕೊಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು.
ಯಡ್ತರೆ ಗ್ರಾಪಂ ವ್ಯಾಪ್ತಿಯ ಸಹಿಪ್ರಾ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ದಂತ, ನೇತ್ರ ಚಿಕಿತ್ಸಾ ಮತ್ತು ರಕ್ತವರ್ಗೀಕರಣ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘ ಪ್ರಾರಂಭಗೊಂಡ ದಿನದಂದೇ 55 ವರ್ಷ ಇತಿಹಾಸವುಳ್ಳ ಈ ಭಾಗದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ವ್ಯವಸ್ಥಿತವಾಗಿ ಬೃಹತ್ ಮಟ್ಟದ ಆರೋಗ್ಯ ಶಿಬಿರ ಸಂಘಟಿಸಿ ಈ ಭಾಗದ ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಹಳೆ ವಿದ್ಯಾರ್ಥಿ ಸಂಘ ಉದ್ಘಾಟಿಸಿದರು. ಕೊರಾಡಿ ಸೈಂಟ್ ಮೆರಿಸ್ ಚರ್ಚ್ ಧರ್ಮಗುರು ರೆ.ಫಾ.ಆದರ್ಶ ಶುಭಸಂಸನೆಗೈದರು. ಈ ಸಂದರ್ಭ ಗ್ರಾಮದ ಹಿರಿಯರು ಹಾಗೂ ದಾನಿಗಳಾದ ರಾಜನ್ ದಂಪತಿಗಳನ್ನು ಶಾಸಕರು ಸನ್ಮಾನಿಸಿದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಸ್. ರಾಜು ಪೂಜಾರಿ, ರಾಮ ಕೆ., ಮಾಜಿ ಸದಸ್ಯ ಶಂಕರ ಪೂಜಾರಿ, ಗ್ರಾಪಂ ಸದಸ್ಯೆ ಬುಡ್ಡಿ ನಾಗಯ್ಯ ಗೊಂಡ, ವಲಯ ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬೈಂದೂರು ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್ ಭಟ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ನೇತ್ರ ಚಿಕಿತ್ಸಾ ತಜ್ಞೆ ಡಾ. ಮನಾಲಿ ಹಜಾರಿಕಾ, ದಂತ ಚಿಕಿತ್ಸಾ ತಜ್ಞ ಡಾ. ಆನಂದ್, ಅರಣ್ಯಪಾಲಕ ಸದಾಶಿವ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಮರಾಠಿ, ಮುಖ್ಯಶಿಕ್ಷಕ ನಾರಯಣ ಶೇರುಗಾರ್ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ಖಜಾಂಚಿ ಜೈಸನ್ ಎಂ.ಡಿ ವಂದಿಸಿದರು. ಸುಧಾಕರ ಪಿ ನಿರೂಪಿಸಿದರು. ಪರಿಸರದ ಸುಮಾರು 300ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.