Kundapra.com ಕುಂದಾಪ್ರ ಡಾಟ್ ಕಾಂ

ಗಾಳಿ ಮಳೆಗೆ ಮನೆಯ ಮಾಡು ನೆಲಸಮ. ಅಪಾಯದಿಂದ ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ನಿರಂತರವಾಗಿ ಗಾಳಿ ಮಳೆಯಾಗುತ್ತಿದ್ದು, ಕೃಷಿ, ತೋಟ ಹಾಗೂ ಆಸ್ತಿಪಾಸ್ತಿಗಳು ಅಪಾರ ಹಾನಿಯಾಗುತ್ತಿದೆ. ಈ ನಡುವೆ ಬುಧವಾರ ರಾತ್ರಿಯ ಸುರಿದ ಗಾಳಿ ಸಹಿತ ಮಳೆಗೆ ತಾಲೂಕಿನ ಬಿಜೂರು ಗ್ರಾಮದ ಮನೆಯೊಂದರ ಮಾಡು, ಗೋಡೆ ನೆಲಸಮವಾಗಿದೆ.

ಬಿಜೂರು ಗ್ರಾಮದ ಕಂಚಿಕಾನು ಉಪಾಧ್ಯಾಯರ ಮನೆ ದುರ್ಗಿ ಪೂಜಾರ್ತಿ ಅವರ ಮನೆ ಗಾಳಿಮಳೆಗೆ ಹಾನಿಯಾಗಿದೆ. ರಾತ್ರಿ ಮನೆಯಲ್ಲಿ ಮೂವರು ಮಲಗಿದ್ದ ವೇಳೆ ಮಾಡು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಒಂದು ಪಾರ್ಶ್ವದ ಮಾಡು, ಗೋಡೆ ಹಾಗೂ ಅಟ್ಟಣಿಗೆಯ ಮಾಡು ಗಾಳಿಯ ರಭಸಕ್ಕೆ ಕುಸಿದು ಬಿದ್ದಿದೆ. ಮಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಶಿಥಿಲಗೊಂಡಿರುವ ಮನೆಯ ಸಂಪೂರ್ಣ ಮಾಡು ಕುಸಿದು ಬೀಳುವ ಸಾಧ್ಯತೆ ಇದೆ. ಘಟನೆಯಲ್ಲಿ 5 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ತಹಶಿಲ್ದಾರ್‌ ಪ್ರದೀಪ್‌ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಂದಾಪುರದಲ್ಲಿ ಮನೆ ಮೇಲೆ ಬಿದ್ದ ಮರ:
ಕುಂದಾಪುರ ಖಾರ್ವಿಕೇರಿಯ ಕೆಳಕೇರಿ ಬಸವ ಖಾರ್ವಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದ್ದು ಮೂವರು ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ಬಸವ ಖಾರ್ವಿ, ಮಾಲತಿ ಹಾಗೂ ಗೌರಿ ಗಾಯಗೊಂಡಿದ್ದು ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ತಹಶಿಲ್ದಾರ್ ಶೋಭಾಲಕ್ಷ್ಮೀ, ವೃತ್ತನಿರೀಕ್ಷಕ ನಂದಕುಮಾರ್ ಭೇಟಿ ನೀಡಿದ್ದಾರೆ.

ಶಾಲೆ – ಪಿಯು ಕಾಲೇಜುಗಳಿಗೆ ರಜೆ:
ಬೈಂದೂರು ಹಾಗೂ ಹೆಬ್ರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ದಿನಾಂಕ 18.07.2024 ರಂದು ರಜೆಯನ್ನು ತಾಲ್ಲೂಕಿನ ತಹಶಿಲ್ದಾರರುಗಳು ಘೋಷಣೆ ಮಾಡಿದ್ದಾರೆ.

Exit mobile version