ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ನೂತನ ಅಧ್ಯಕ್ಷರಾಗಿ ಕತಾರ್ ನಿವಾಸಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಮಹಾಪೋಷಕರಾಗಿ ವರದರಾಜ್ ಎಂ. ಶೆಟ್ಟಿ, ಪೋಷಕರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಮಣೆಗಾರ್ ಮೀರಾನ್ ಸಾಹೇಬ್ ಅವರು ಮುಂದುವರಿಯಲಿದ್ದಾರೆ. ಸ್ಥಾಪಕ ಅಧ್ಯಕ್ಷರಾದ ಸದನ್ ದಾಸ್ ಅವರು ಮುಖ್ಯ ಸಲಹೆಗಾರರಾಗಿ, ದಿನೇಶ್ ದೇವಾಡಿಗ ಹಾಗೂ ಸುಜಿತ್ ಕುಮಾರ್ ಶೆಟ್ಟಿ ಅವರು ಉಪಾಧ್ಯಕ್ಷರಾಗಿ, ಸುಧಾಕರ ಪೂಜಾರಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಕತಾರ್ ದೇಶದಲ್ಲಿ ನೆಲೆಸಿ, ತಮ್ಮ ಸಮಾಜ ಸೇವೆಯಿಂದ ಕತಾರ್ ಕನ್ನಡಿಗ ಸಮುದಾಯ ಹಾಗೂ ಇಡೀ ಭಾರತೀಯ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಕಾರ್ಯದ ಜೊತೆಗೆ, ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹವರ್ತಿ ಸಂಸ್ಥೆಗಳು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಮ್ಮ ಸಾಂಸ್ಕೃತಿಕ ಸೇವೆಗಳಿಗೆ ಹೆಸರುವಾಸಿಯಾಗಿದ್ದಾರೆ. ಕತಾರ್ ರಾಜ್ಯಕ್ಕೆ ಕನ್ನಡದ ಚಲನಚಿತ್ರಗಳನ್ನು ಪರಿಚಯಿಸುವಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ. ಕೋವಿಡ್ -19ರ ಸವಾಲಿನ ಸಮಯದಲ್ಲಿ ಭಾರತೀಯ ಸಮುದಾಯಗಳನ್ನು ತಾಯ್ನಾಡಿಗೆ ಮರುಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕರ್ನಾಟಕ ಸಂಘ ಕತಾರ್ ಇದರ ಹಿರಿಯ ಸದಸ್ಯರು ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಐಸಿಬಿಎಫ್ ಮತ್ತು ಹಲವಾರು ಇತರ ಪ್ರಮುಖ ಸಹಯೋಗಿ ಸಂಸ್ಥೆಗಳಲ್ಲಿ ನಿರ್ವಹಣಾ ಸ್ಥಾನಗಳನ್ನು ಅಲಂಕರಿಸಿದ್ದು, ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.