ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಯುಷ್ ಔಷಧಿಗಳಿಂದ ಅಡ್ಡ ಪರಿಣಾಮಗಳಿಲ್ಲದೆ ಕಾಯಿಲೆ ಗುಣಪಡಿಸಬಹುದು, ಜೊತೆಯಲ್ಲಿ ಜೀವನ ಶೈಲಿ ಆಹಾರದ ಬದಲಾವಣೆ ಇಂದ ಆರೋಗ್ಯವಂತರಾಗಿ ಬದುಕಬಹುದು. ಅಲ್ಲದೆ ಹಿರಿಯ ನಾಗರಿಕರಿಗೆ ಈ ಶಿಬಿರ ಏರ್ಪಡಿಸಿ ರುವುದರಿಂದ ಇಲ್ಲಿಯ ಮಾಹಿತಿ ಔಷಧಿಗಳಿಂದ ಇನ್ನಷ್ಟು ವರ್ಷ ಹೆಚ್ಚಿಗೆ ಬದುಕಬಹುದು ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ ಭಟ್ನಾಡಿ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ಆಯುಷ್ ಇಲಾಖೆ, ಕಾಲ್ತೋಡು ಗ್ರಾಮ ಪಂಚಾಯತ್ ಹಾಗೂ ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ 80 ವರ್ಷ ಮೇಲ್ಪಟ್ಟ ಸಮಾಜಸೇವಕರು ಹಿರಿಯರ ಆದ ಸಂಜೀವ್ ಶೆಟ್ಟಿ ಅವರು ಆಯುರ್ವೇದ ಮನೆಮದ್ದಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಗ್ರಾಮ ಪಂಚಾಯತ್ ಕಾಲ್ತೋಡು ಕಾರ್ಯದರ್ಶಿಗಳಾದ ಆನಂದ ಬಿಲ್ಲವ, ಡಾ. ನಾಗರಾಜ್ ಕೌಲಗಿ ಹಾಗೂ ಸಿ. ಎಚ್. ಒ. ಅರುಣ್ ಪ್ರಾ. ಆ. ಕೇಂದ್ರ ಕಿರಿಮಂಜೇಶ್ವರ ಇವರು ವೇದಿಕೆಯಲ್ಲಿ ಇನ್ನಿತರರು ಉಪಸ್ಥಿತರಿದ್ದರು.
ಡಾ. ನಾಗರಾಜ್ ಕೌಲಗಿ, ವೈದ್ಯಾಧಿಕಾರಿಗಳು ಸ. ಆ. ಚಿ. ಬೆಳ್ಳಾಲ ಇವರು ಹಿರಿಯ ನಾಗರಿಕರಲ್ಲಿ ಕಾಡುವಂತಹ ರಕ್ತದೊತ್ತಡ, ಮಧುಮೇಹ, ಸಂಧಿಶೂಲ, ನಿದ್ರಾ ಹೀನತೆ ಮೊದಲಾದ ಕಾಯಿಲೆಗಳ ಬಗ್ಗೆ ಮಾಹಿತಿ ಹಾಗೂ ಮನೆಮದ್ದುಗಳನ್ನ ತಿಳಿಸಿದರು.
ಡಾ. ವೀಣಾ ಕಾರಂತ್ ವೈದ್ಯಾಧಿಕಾರಿಗಳು ಸ. ಆ. ಚಿ ಕಾಲ್ತೋಡು ಇವರು ಡೆಂಗ್ಯೂ ಜ್ವರ ಲಕ್ಷಣಗಳ ಬಗ್ಗೆ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಆಯುಷ್ ಮಾಹಿತಿ ನೀಡಿದರು. ಅಲ್ಲದೆ ಸೊಳ್ಳೆಗಳನ್ನ ನಿಯಂತ್ರಿಸಲು ಉಪಯೋಗಿಸುವ ಮನೆಯಲ್ಲೇ ದೊರೆಯುವ ಸಾಸಿವೆ, ಬೆಳ್ಳುಳ್ಳಿ ಸಿಪ್ಪೆ, ಲೋಬಾನ, ಲಕ್ಕಿ ಸೊಪ್ಪು, ಕಹಿಬೇವಿನ ಸೊಪ್ಪು ಮುಂತಾದ ದೂಪ ದ್ರವ್ಯಗಳನ್ನ ಪ್ರದರ್ಶಿಸಿ ಧೂಪ ಹಾಕುವ , ಪ್ರಾತ್ಯಕ್ಷಿಕೆಯನ್ನ ತೋರಿಸಿದರು. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಕಷಾಯ ದ್ರವ್ಯಗಳಾದ ಕಾಳುಮೆಣಸು, ಶುಂಠಿ, ಬೆಲ್ಲ,ತುಳಸಿ, ನೆಲನೆಲ್ಲಿ ಅಮೃತಬಳ್ಳಿ ಇತ್ಯಾದಿಗಳನ್ನು ಪ್ರದರ್ಶನದಲ್ಲಿ ಇರಿಸಿ ಜೊತೆಯಲ್ಲಿ ಕಷಾಯ ಮಾಡುವ ಬಗೆಯನ್ನು ವಿವರಿಸಿದರು .
ಹಿರಿಯ ನಾಗರೀಕರ ಆರೋಗ್ಯ ಮಾಹಿತಿಯುಳ್ಳ ಹಾಗೂ ಡೆಂಗ್ಯು ಮಾಹಿತಿಯುಳ್ಳ ಆಯುಷ್ ಕರಪತ್ರಗಳನ್ನು ವಿತರಿಸಲಾಯಿತು. ಯೋಗ ತರಬೇತುದಾರರಾದ ಸರಸ್ವತಿ ಕುಲಾಲ್ , ಶೇಖರ್ ಶೆಟ್ಟಿ ಅವರು ಹಿರಿಯರು ಮಾಡುವ ಸಾಮಾನ್ಯ ಯೋಗ ಹಾಗೂ ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ನಂತರ ಭಾಗವಹಿಸಿದ ಹಿರಿಯ ನಾಗರೀಕರ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಿ , ಆರೋಗ್ಯ ತಪಾಸಣೆ ನಡೆಸಿ, ಔಷಧಿ ವಿತರಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಕಿರುಮಂಜೇಶ್ವರ ಇಲ್ಲಿಯ ಸಿಎಚ್ಒ ಅರುಣ್ ಆಶಾ ಕಾರ್ಯಕರ್ತೆಯರಾದ ಸುಜಾತ ಶೆಟ್ಟಿ, ಸುಜಾತಾ, ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರ ಇಲ್ಲಿಯ ಸಿಬ್ಬಂದಿಗಳಾದ ನಾಗದೀಪ ಆಚಾರ್ಯ ವಿಶಾಲ ಕಾರ್ಯಕ್ರಮಕ್ಕೆ ಸಹಕರಿಸಿದರು.
ಭಾಗವಹಿಸಿದವರೆಲ್ಲರಿಗೂ ಆಯುಷ್ ಕಷಾಯ , ಸಿರಿಧಾನ್ಯ ಬಿಸ್ಕೆಟ್ ಹಂಚಲಾಯಿತು. ಡಾಕ್ಟರ್ ವೀಣಾ ಕಾರಂತ್ ವೈದ್ಯಾಧಿಕಾರಿಗಳು ಸ.ಆ.ಚಿ.ಕಾಲ್ತೋಡು ಕಾರ್ಯಕ್ರಮ ನಿರೂಪಿಸಿ ಹೊಂದಿಸಿದರು. 84 ಜನ ಹಿರಿಯ ನಾಗರೀಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

