ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗ್ರಾಮಗಳ ಸವಾಂಗೀಣ ಅಭಿವೃದ್ಧಿ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಕಂಡ ಕನಸು. ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯನ್ನು ಕಟ್ಟಿ ಇದರ ಮೂಲಕ ನನಸು ಮಾಡುವ ಮಹತ್ತರ ಕೆಲಸವನ್ನು ಕಳೆದ 42 ವರ್ಷಗಳಿಂದ ನಿರಂತರವಾಗಿ ಪೂಜ್ಯ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಕಾರ್ಯಕ್ರಮ, ಘಟಕಗಳನ್ನು ಪ್ರಾರಂಭ ಮಾಡಿ ಇದರ ಮೂಲಕ ಸಮಾಜವನ್ನು ಸದೃಢಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಹೇಳಿದರು.
ಮರವಂತೆಯ ಸಾಧನಾ ಸಭಾ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ ಆಚಾರ್ಯ ಅವರು ಜನಜಾಗೃತಿ ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ, ಗಾಂಧಿ ಜಯಂತಿ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ನವಜೀವನ ಸಮಿತಿಯ ಸಭೆಯನ್ನು ಪರಿಣಾಮಕಾರಿಯಾಗಿ ಮಾಡುವ ಬಗ್ಗೆ ಹಾಗೂ 2024ನೇ ಸಾಲಿನ ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಬೈಂದೂರು ತಾಲೂಕು ಯೋಜನಾಧಿಕಾರಿಗಳಾದ ಕೆ. ವಿನಾಯಕ ಪೈ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಜನಜಾಗೃತಿ ವೇದಿಕೆಗೆ 7 ಮಂದಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಬೈಂದೂರು ತಾಲೂಕು ಸ್ವ ಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರು, ಯೋಜನೆಯ ಕಾರ್ಯಕರ್ತರು, ನವಜೀವನ ಪೋಷಕರು ಉಪಸ್ಥಿತರಿದ್ದರು.
ಪಡುಕೋಣೆ ವಲಯ ಮೇಲ್ವಿಚಾರಕಿ ಪಾರ್ವತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು ವರದಿ ವಾಚಿಸಿದರು. ಗೋಳಿಹೊಳೆ ವಲಯ ಮೇಲ್ವಿಚಾರಕಿ ಸಂಗೀತ ವಂದಿಸಿದರು.