Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಕ್ಷೇತ್ರದಲ್ಲಿ ಶಾಸಕರು – ಸಂಸದರ ಅಭಿವೃದ್ಧಿ ಪೋಟೋಗೆ ಮಾತ್ರ ಸೀಮಿತ: ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಚುನಾವಣೆಯಲ್ಲಿ ಅಭಿವೃದ್ಧಿ ಕನಸಿನ ಗೋಪುರ ಕಟ್ಟಿದ ಶಾಸಕ ಗುರುರಾಜ್ ಗಂಟಿಹೊಳೆಯವರು ಚುನಾವಣೆ ನಂತರ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದ್ದಾರೆ. ಈಗ ಜನತೆ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ರಾಜ್ಯ ಸರ್ಕಾರ ಅನುದಾನ ನೀಡುವುದಿಲ್ಲ ಎನ್ನುವುದು ಜನಪ್ರತಿನಿಧಿಯ ವೈಫಲ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

ಶಾಸಕರಾದ ಗುರುರಾಜ ಗಂಟಿಹೊಳೆ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಅವರಿಗೆ ಅಭಿವೃದ್ಧಿಯ ಬಗ್ಗೆ ಚಿಂತನೆ ಇದ್ದಿದ್ದರೆ ಮೂರು ಅವಧಿಯಿಂದ ಕೇಂದ್ರದಲ್ಲಿ ಇವರದ್ದೇ ಸರ್ಕಾರವಿದೆ. ಸತತವಾಗಿ ಶಿವಮೊಗ್ಗ ಕ್ಷೇತ್ರದ ಸಂಸದರಾಗಿ ಬಿ. ವೈ ರಾಘವೇಂದ್ರ ಆಯ್ಕೆಯಾಗುತ್ತಿದ್ದಾರೆ. ಆದರೆ ಇವರಿಬ್ಬರು ಅಭಿವೃದ್ಧಿಯ ಕೇವಲ ಮನವಿ ಕೊಟ್ಟು ಅದರ ಫೋಟೋ ಹಾಕಿ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಆದ ಘೋರ ಅನ್ಯಾಯದ ಬಗ್ಗೆ ಇವರು ಮಾತನಾಡುತ್ತಿಲ್ಲ. ನೆರೆಯಿಂದ ಸಂಪೂರ್ಣ ಬೈಂದೂರು ಕ್ಷೇತ್ರದ ಜನತೆ ತತ್ತರಿಸಿ ಹೋಗಿದ್ದಾರೆ. ಕೃಷಿ ಸಂಪೂರ್ಣ ಹಾಳಾಗಿದೆ, ಮೀನುಗರಾರು, ಮೂರ್ತೆದಾರರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ, ಇವರಿಗೆ ಕೇಂದ್ರ ಸರ್ಕಾರದಿಂದ ಅತೀ ಹೆಚ್ಚಿನ ಆರ್ಥಿಕ ನೆರವು ಒದಗಿಸುವುದನ್ನು ಬಿಟ್ಟು ಇವರು ಕೇವಲ ರಾಜಕಾರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಶಾಸಕರು ಹಾಗೂ ಸಂಸದರಿಗೆ ಕ್ಷೇತ್ರದ ಹಿತ ಚಿಂತನೆ ಇದ್ದರೆ ಕೇಂದ್ರ ಸರ್ಕಾರದಿಂದ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಿ. ಇವರ ಕೆಲವೊಂದು ಅಭಿವೃದ್ಧಿಯ ಯೋಚನೆ, ಯೋಜನೆಗಳು ಪ್ರಕೃತಿ ನಾಶ ಮಾಡಿ ಭೂ ವ್ಯವಹಾರ ಮಾಡುವವರಿಗೆ ಲಾಭ ಮಾಡುವ ಉದ್ದೇಶವನ್ನು ಮಾತ್ರ ಹೊಂದಿವೆ. ಬೈಂದೂರು ಶಾಸಕರು ಹಾಗೂ ಸಂಸದರು ಇನ್ನಾದರೂ ಕ್ಷೇತ್ರ ಜನರಿಗೆ ಕಟ್ಟಿ ತೋರಿಸಿದ ಅಭಿವೃದ್ಧಿ ಎನ್ನುವ ಕನಸಿನ ಗೋಪುರವನ್ನು ನನಸು ಮಾಡುವ ಪ್ರಾಮಾಣಿಕ ಕಾರ್ಯ ಕೈಗೊಳ್ಳಲಿ ಎಂದು ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Exit mobile version