ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಗುವಿನ ಜನನದ ಕೆಲವು ಗಂಟೆಗಳು ಗೊಲ್ಡನ್ ಅವರ್ ಆಗಿದ್ದು ಈ ವೇಳೆ ತಾಯಂದಿರು ಸ್ತನಪಾನ ಮಾಡುವುದು ಬಹಳ ಮುಖ್ಯ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ, ಮಕ್ಕಳ ತಜ್ಞೆ ಡಾ. ನಂದಿನಿ ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ನೇತೃತ್ವದಲ್ಲಿ, ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು ಸಹಯೋಗದೊಂದಿಗೆ ಆಯೋಜಿಸಲಾದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಗುವಿನ ಜನನದ ದಿನದಿಂದ ನಿಯಮಿತವಾಗಿ ಸ್ತನಪಾನ ಮಾಡುವುದರಿಂದ ತಾಯಿಯೊಂದಿಗೆ ಮಗುವಿನ ಭಾಂದವ್ಯ ವೃದ್ಧಿಯ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ. ಎದೆಹಾಲು ಕುಡಿದ ಮಕ್ಕಳು ಆರೋಗ್ಯವಂತರಾಗಿರುವುದಲ್ಲದೇ ಬುದ್ಧಿವಂತರು, ಮನೋಸ್ಥೈರ್ಯ ಹೊಂದಿರುವವರು ಆಗಿರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ಮಹಿಳೆ ಗರ್ಭಿಣಿಯಾದ ದಿನದಿಂದ ಹೆರಿಗೆಯ ತನಕವೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆಯಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಬೈಂದೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ ಐ. ನಾರಾಯಣ್, ಇನ್ನರ್‌ವೀಲ್ ಅಧ್ಯಕ್ಷೆ ಗುಲಾಬಿ ಮರವಂತೆ, ಬೈಂದೂರು ರೋಟರಿ ಕಾರ್ಯದರ್ಶಿ ಸುನಿಲ್ ಹೆಚ್. ಜಿ., ಇನ್ನರ್‌ವೀಲ್ ಕಾರ್ಯದರ್ಶಿ ಚೈತ್ರಾ ಯಡ್ತರೆ ಉಪಸ್ಥಿತರಿದ್ದರು.