Site icon Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರಿಗೆ ವಿವಿಧ ಯೋಜನೆ: ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಜಿಲ್ಲಾ ವಲಯ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಾವಿ ಮತ್ತು ಹೊಂಡಗಳಲ್ಲಿ ಮೀನು ಕೃಷಿಗೆ ಸಹಾಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕಾ ಸಲಕರಣೆ ಕಿಟ್ಟುಗಳ ವಿತರಣೆ ಮತ್ತು ಮೀನುಗಾರಿಕೆಯಲ್ಲಿ ಅನುಭವ ಹೊಂದಿರುವ ಅರ್ಹ ಸಾಮಾನ್ಯ ವರ್ಗ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಅಂಗವಿಕಲರಿಗೆ ಮೀನು ಮಾರಾಟಕ್ಕೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಖರೀದಿಗೆ ಸಹಾಯ ಮತ್ತು ರಾಜ್ಯ ವಲಯ ಯೋಜನೆಯಡಿ ಕರಾವಳಿ ತಾಲೂಕುಗಳ ಅರ್ಹ ಫಲಾನುಭವಿಗಳಿಗೆ ಜೀವರಕ್ಷಕ ಸಾಧನ, ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಫಲಾನುಭವಿಗಳಿಗೆ ಮೀನುಗಾರಿಕೆ ಹಾಗೂ ಮೀನು ಮಾರಾಟ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದು, ಸಿಗಡಿ ಮತ್ತು ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ, ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ಎಫ್. ಆರ್. ಪಿ ಪಾತಿದೋಣಿ ಮತ್ತು ಜೀವ ರಕ್ಷಕ ಸಾಧನಗಳನ್ನು ಉಚಿತವಾಗಿ ನೀಡುವ ಯೋಜನೆಗಳನ್ನು ಪಾರದರ್ಶಕವಾಗಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ. 

Exit mobile version