Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ, ಸಂಚಾರ ಸ್ಥಗಿತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾಗಿದ ಪರಿಣಾಮ ಕೆಲ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಶನಿವಾರ ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರದಂದು ಹೊರಟಿದ್ದ ಬೆಂಗಳೂರು-ಕಣ್ಣೂರು (ಕಣ್ಣೂರು ಎಕ್ಸ್ ಪ್ರೆಸ್) ಮತ್ತು ಬೆಂಗಳೂರು-ಮರ್ಡೇಶ್ವರ (ಮುರ್ಡೇಶ್ವರ ಎಕ್ಸ್ ಪ್ರೆಸ್) ರೈಲುಗಳು ಆಲೂರು ಹಾಗೂ ಹಾಸನದಲ್ಲಿ ಸ್ಥಗಿತಗೊಂಡಿದೆ. ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ರೈಲು ಇಲಾಖೆ ಟ್ವೀಟ್ ಮಾಡಿದೆ.

ಜು.26ರಂದು ದೋಣಿಗಲ್‌-ಕಡಗರವಳ್ಳಿ ನಡುವೆ ಭಾರಿ ಪ್ರಮಾಣದಲ್ಲಿ ಗುಡ್ಡಕುಸಿತದಿಂದ ಮಣ್ಣು ಹಳಿಗೆ ಬಿದ್ದಿತ್ತಲ್ಲದೆ, ಕೆಳಗೆ ಭೂಕುಸಿತದಿಂದ ಪ್ರಪಾತ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ರೈಲ್ವೆ ತಾಂತ್ರಿಕ ವರ್ಗ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಾರಿ ಮಳೆಯ ನಡುವೆಯೂ ಹಗಲು ರಾತ್ರಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ಗುರುವಾರ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಹಳಿ ಹಾಗೂ ತಡೆಗೋಡೆ ದುರಸ್ತಿ ಪೂರ್ಣಗೊಂಡು ಭಾನುವಾರದಿಂದ ಎರಡು ದಿನಗಳ ಕಾಲ ಪ್ರಾಯೋಗಿಕವಾಗಿ ಗೂಡ್ಸ್‌ ರೈಲು ಸಂಚಾರ ನಡೆಸಲಾಗಿತ್ತು. ಅದು ಯಶಸ್ವಿಯಾದ ನಂತರ ಗುರುವಾರದಿಂದ ಪ್ಯಾಸೆಂಜರ್‌ ಓಡಾಟಕ್ಕೆ ಅನುಮತಿಸಲಾಗಿದೆ.ಗುರುವಾರ ಮಧ್ಯಾಹ್ನ 12.30ಕ್ಕೆ ದೋಣಿಗಲ್‌-ಕಡಗರವಳ್ಳಿ ನಡುವೆ ಭೂಕುಸಿತ ನಡೆದ ಪ್ರದೇಶದಲ್ಲಿ ಯಶವಂತಪುರ-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಹಾದುಹೋಗಿದೆ. ಆದರೆ ಮತ್ತೆ ಇದೇ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ರದ್ದಾಗಿದೆ.

ಆ.11 ರಂದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಪ್ರಾರಂಭವಾಗಬೇಕಿದ್ದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣವು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಶನಿವಾರ ಯಶವಂತಪುರ ಜಂಕ್ಷನ್‌ನಿಂದ ಸಂಚರಿಸುವ ರೈಲು ಸಂಖ್ಯೆ 16539 ಯಶವಂತಪುರ ಜಂಕ್ಷನ್ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಚನ್ನರಾಯಪಟ್ಟಣದ ತನಕ ಮಾತ್ರ ಸಂಚರಿಸಲಿದ್ದು, ಈ ರೈಲಿನ ಸೇವೆ ಚನ್ನರಾಯಪಟ್ಟಣ ಮತ್ತು ಮಂಗಳೂರು ಜಂಕ್ಷನ್ ನಡುವೆ ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ನಿಂತಿರುವ ಆರು ರೈಲುಗಳು ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ರೈಲಿನಲ್ಲಿ ಪ್ರಯಾಣಿಕರು ಇಡೀ ರಾತ್ರಿ ಪರಾದಾಡುವಾತಾಗಿದೆ. ಇನ್ನು ರಾತ್ರಿ ವೇಳೆ ಸಂಚಾರ ನಡೆಸುವ ರೈಲುಗಳು ಸಕಲೇಶಪುರ, ಯಡಕುಮಾರಿ, ಶಿರವಾಗಲು, ಆಲೂರು ಸೇರಿ ಆರು ರೈಲ್ವೆ ನಿಲ್ದಾಣ ದಲ್ಲಿಯೇ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಆರು ರೈಲುಗಳ ಪ್ರಯಾಣಿಕರಿಗೆ ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಒತ್ತಾಯ ಮಾಡಿದ್ದು ಕೂಡಲೇ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿ ಎಂದು ರೈಲ್ವೆ ಇಲಾಖೆಗೆ ಅಗ್ರಹಿಸಿದ್ದಾರೆ.

Exit mobile version