Kundapra.com ಕುಂದಾಪ್ರ ಡಾಟ್ ಕಾಂ

ಒಂದು ಯುನಿಟ್ ರಕ್ತ ಮೂವರ ಜೀವ ರಕ್ಷಣೆ ಮಾಡಬಲ್ಲದು: ಡಾ. ಆಶಿಷ್ ಚೋಪ್ರಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಒಂದು ಯುನಿಟ್ ರಕ್ತದಿಂದ ಮೂವರು ವ್ಯಕ್ತಿಗಳ ಜೀವ ರಕ್ಷಣೆ ಮಾಡಲು ಸಾಧ್ಯವಿದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಕೆಲವು ವಾರಗಳಲ್ಲಿ ದೇಹವು ರಕ್ತವನ್ನು ನವೀಕರಿಸಲು ಅನುವು ಮಾಡಿಕೊಡುವುದಲ್ಲದೇ ಪರೋಪಕಾರ ಮಾಡಿದಂತೆಯೂ ಆಗುತ್ತದೆ ಎಂದು ಕೆ.ಎಂ.ಸಿ ರಕ್ತನಿಧಿ ವಿಭಾಗದ ವೈದ್ಯ ಡಾ. ಆಶಿಷ್ ಚೋಪ್ರಾ ಹೇಳಿದರು.

ಅವರು ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಶ್ರೀ ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘ ಬಿಜೂರು, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘ, ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಬೈಂದೂರು, ಆಸರೆ ಬಳಗ ಫಿಶರೀಸ್ ಕಾಲೋನಿ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ರಕ್ತನಿಧಿ ವಿಭಾಗದ ಮೂಲಕ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಆರೋಗ್ಯವಂತ ಮನಷ್ಯಗೆ ವರ್ಷದಲ್ಲಿ ನಾಲ್ಕು ಭಾರಿ ರಕ್ತದಾನ ಮಾಡಲು ಅವಕಾಶವಿದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದಲ್ಲದೇ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶ್ರೀ ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಪರಮೇಶ್ವರ ಪೂಜಾರಿ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಅಶೋಕ್ ಶೇಟ್, ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷ ಸುರೇಂದ್ರ ಡಿ. ಪಡುವರಿ, ಉಪ್ಪುಂದ ಆಸರೆ ಬಳಗದ ಭುವನ್, ರೋಟರಿ ಸದಸ್ಯರಾದ ಐ. ನಾರಾಯಣ್ ಉಪ್ಪುಂದ, ಮಂಜುನಾಥ ಮಹಾಲೆ, ಕೃಷ್ಣಮೂರ್ತಿ ಶೇಟ್ ಉಪಸ್ಥಿತರಿದ್ದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಸ್ವಾಗತಿಸಿ, ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 53 ಯುನಿಟ್ ರಕ್ತ ಸಂಗ್ರಹವಾಯಿತು.

Exit mobile version