ಕುಂದಾಪುರ: ಹುಲ್ಲು ತುಂಬಿಸಿಕೊಂಡು ಸಂಚರಿಸುತ್ತಿದ್ದ ಮಿನಿ ಲಾರಿಯೊಂದಕ್ಕೆ ಪ್ರಯಾಣಿಸುತ್ತಿರುವಾಗಲೇ ಬೆಂಕಿ ತಗುಲಿಕೊಂಡ ಘಟನೆಯಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿ ಹೋದ ಘಟನೆ ಸಂಜೆ ತೆಕ್ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
407 ಲಾರಿಯೊಂದು ಬೈಹುಲ್ಲು ತುಂಬಿಸಿಕೊಂಡು ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಸಂಚರಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿ ತೆಕ್ಕಟ್ಟೆ ಸಮೀಪಿಸುತ್ತಿರುವಂತೆ ಲಾರಿಯ ಹಿಂಭಾಗದಲ್ಲಿದ್ದ ಬೈಹುಲ್ಲಿನಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಚಾಲಕನ ಗಮನಕ್ಕೆ ತಂದಿದ್ದಾರೆ. ಚಾಲಕನೂ ಎದೆಗುಂದದೇ ಲಾರಿಯ ಹಿಂಬದಿಯ ಟ್ರೈಲರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ಗಟ್ಟಿಯಾಗಿ ಕಟ್ಟಿಕೊಂಡಿದ್ದ ಬೈಹುಲ್ಲು ರಾಶಿ ಅಷ್ಟು ಸುಲಭಕ್ಕೆ ಕೆಳಗೆ ಬೀಳಲು ಒಪ್ಪಲಿಲ್ಲ. ಅದಾಗಲೇ ಬಂದು ಸೇರಿದ ಜನ ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡಲಾರಂಭಿಸಿದರು. ಕೊನೆಗೂ ಕೆಲವರು ಲಾರಿಯ ಹಿಂಬದಿಗೆ ಹೋಗಿ ಟ್ರೈಲರ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೇ ಬೈಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಟ್ರೈಲರ್ ಮೇಲೆತ್ತುವ ಸೌಲಭ್ಯ ಇದ್ದುದರಿಂದ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮತ್ತು ಚಾಲಕನ ಧೈರ್ಯದಿಂದಾಗಿ ಸಂಭವಿಸಬಹುದಾದ ಭಾರೀ ಅನಾಹುತವೊಂದನ್ನು ತಪ್ಪಿಸಿದಂತಾಗಿದೆ.
ಘಟನೆಯಿಂದಾಗಿ ಸುಮಾರು ಅರ್ಧ ತಾಸುಗಳ ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಡ್ಡವಾಗಿ ಹಾದು ಹೋದ ವಿದ್ಯುತ್ ತಂತಿಯಮ್ಮು ಬೈಹುಲ್ಲು ತಾಗಿರುವ ಕಾರಣದಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾದರೂ ಘಟನೆಗೆ ಕಾರಣ ಸ್ಪಷ್ಟವಾಗಿ ತಿಳಿದುಬಂದಿಲ್ಲ.