Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ ರೂ.200 ಕೋಟಿ ವ್ಯವಹಾರ ನಡೆಸಿ ರೂ.೫೧.೯೬ ಲಕ್ಷ ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.13 ಲಾಭಾಂಶ ನೀಡಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ, ಎಸ್. ರಾಜು ಪೂಜಾರಿ ಹೇಳಿದರು. 

ಬೈಂದೂರು ಪ್ರಧಾನ ಕಛೇರಿಯಲ್ಲಿ ಭಾನುವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಾಲ್ಕು ಶಾಖೆಗಳನ್ನು ಹೊಂದಿದ ನಮ್ಮ ಸಂಘವು 15 ವರ್ಷ ಪೂರೈಸಿದೆ. ಸಹಕಾರಿ ಸಂಸ್ಥೆಗಳನ್ನು ಮುನ್ನೆಡೆಸುವಾಗ ಸವಾಲುಗಳು ಸಹಜ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿಯೇ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರುಗಳಿಸಿದೆ. ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೂ ಸಂಘ ಸಹಕಾರಿಯಾಗಿದೆ. ಗ್ರಾಹಕರ ಸಲಹೆ, ಸೂಚನೆ ಹಾಗೂ ಸಹಕಾರದಿಂದ ಗ್ರಾಮೀಣ ಪ್ರದೇಶದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯದಕ್ಷತೆ ಮತ್ತು ಗುಣಮಟ್ಟದ ಸೇವೆಯಿಂದ ಹಂತಹಂತವಾಗಿ ಸಂಸ್ಥೆಯ ಅಭಿವೃದ್ದಿಯಾಗಿದೆ ಎಂದರು.   

ಗೋಳಿಹೊಳೆ ಶಾಖಾ ಪ್ರಬಂಧಕ ರಾಘವೇಂದ್ರ, ಹಿಂದಿನ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋದನಾ ವರದಿ, ವಾರ್ಷಿಕ ಲೆಕ್ಕಪತ್ರ ನಿವ್ವಳ ಲಾಭ ವಿಲೇವಾರಿ ಮತ್ತು ವಿತರಣೆ, ಮುಂದಿನ ಸಾಲಿನ ಅಂದಾಜು ಬಜೆಟ್ ಅನ್ನು ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದರು. ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಪ್ರಶಾಂತ ಪೂಜಾರಿ ಇದ್ದರು.

ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ. ಕಿಟ್ಟಣ್ಣ ರೈ ನಿರೂಪಿಸಿದರು. ಪ್ರಧಾನ ಕಚೇರಿ ವ್ಯವಸ್ಥಾಪಕ ಶ್ರೀನಿವಾಸ ವಂದಿಸಿದರು.

Exit mobile version