Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಿಶ್ವ ಸಂಸ್ಕೃತ ದಿನ ಮತ್ತು ರಕ್ಷಾ ಬಂಧನ ಆಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶ್ರಾವಣ ಮಾಸದ ಹುಣ್ಣಿಮೆಯ ದಿನವಾದ ಸೋಮವಾರದಂದು ವಿಶ್ವ ಸಂಸ್ಕೃತ ದಿನ ಮತ್ತು ರಕ್ಷಾ ಬಂಧನವನ್ನು ವಿಶಿಷ್ಟ ರೀತಿಯಲ್ಲಿ  ಆಚರಿಸಲಾಯಿತು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ  ನಾಗರಾಜ ಶೆಟ್ಟಿ ಅವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಸಂಸ್ಕೃತ ಉಪನ್ಯಾಸಕಿಯಾದ ಸುಧಾಕ್ಷಿಣಾ ಉಡುಪ, ಸಂಸ್ಕೃತ ದಿನ ಮತ್ತು ರಕ್ಷಾ ಬಂಧನದ ಆಚರಣೆಯ ಹಿನ್ನೆಲೆಯನ್ನು ವರ್ಣಿಸುತ್ತಾ, ವಿಶ್ವ ಸಂಸ್ಕೃತ ದಿನದ ಇತಿಹಾಸವು 1969ರ ಹಿಂದಿನದು. ಭಾರತ ಸರ್ಕಾರವು ಶ್ರಾವಣದ ಹುಣ್ಣಿಮೆಯ ದಿನವನ್ನು ಸಂಸ್ಕೃತ ದಿನವೆಂದು ಘೋಷಿಸಿತು. ಸಂಸ್ಕೃತ ವ್ಯಾಕರಣದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಸಂಸ್ಕೃತ ವಿದ್ವಾಂಸ ಹಾಗೂ ವ್ಯಾಕರಣಕಾರರಾದ ಪಾಣಿನಿಯು ಹುಟ್ಟಿದ ದಿನವನ್ನು ಅವರ ಸವಿನೆನಪಿಗಾಗಿ ಆಚರಣೆ ಮಾಡಲಾಗಿದೆ ಎಂದು ಅದರ ಮಹತ್ವದ ಬಗ್ಗೆ ತಿಳಿಸಿದರು.

ರಕ್ಷಾ ಬಂಧನದ ಕಥೆಯು ಹಿಂದೂ ಪುರಾಣ ಮತ್ತು ಹಿಂದೂ ಮಹಾಕಾವ್ಯ ಮಹಾಭಾರತಕ್ಕೆ ಸಂಬಂಧಿಸಿದೆ. ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮಹತ್ವವನ್ನು ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ನಂತರ ವಿದ್ಯಾರ್ಥಿನಿಯರು ತಮ್ಮ ಸಹೋದರರಿಗೆ ಸಮಾನರಾದ ವಿದ್ಯಾರ್ಥಿಗಳಿಗೆ ’ರಾಖಿ’ ಕಟ್ಟಿ ರಕ್ಷಾ ಬಂಧನದ ಹಬ್ಬದ ಆಚರಣೆಗೆ ವಿಶೇಷ ಮೆರಗನ್ನು ನೀಡಿದರು.

ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಆಚಾರ್ಯ, ಸಂಸ್ಕೃತ ಶಿಕ್ಷಕರಾದ ಸುಬೋಧ, ಕಾಲೇಜಿನ ಉಪನ್ಯಾಸಕರು, ಪ್ರೌಢಶಾಲಾ ಸಹಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕ ಸಂದೀಪ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Exit mobile version