ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ರೋಟರಿ ಕ್ಲಬ್ ಕುಂದಾಪುರದ ಅಗಸ್ಟ್ ತಿಂಗಳ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಪ್ರಪ್ರಥಮ ಬಾರಿ ಸದಸ್ಯರಿಂದ ಭೀಷ್ಮ ವಿಜಯ ಪೌರಾಣಿಕ ಯಕ್ಷಗಾನ ಪ್ರದರ್ಶನ ಬಹಳ ಅದ್ದೂರಿಯಾಗಿ ನಡೆದು ಪ್ರೇಕ್ಷಕರ ಮನಸೂರೆಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಭಟ್ ಬಾಳ್ಕಲ್. ಮಧುಕರ್ ಹೆಗ್ಡೆ. ಡಾ. ಹರಿಪ್ರಸಾದ್, ಚಂಡೆಯಲ್ಲಿ ಗಣೇಶ್ ಶೆಟ್ಟಿ, ಮದ್ದಲೆಯಲ್ಲಿ ಭರತ್ ಚಂದನ್ ಗಮನ ಸೆಳೆದರು. ಭೀಷ್ಮನಾಗಿ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಪಾತ್ರದ ಗತ್ತು, ಸ್ವರಭಾರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಖ್ಯಾತ ಯಕ್ಷಗಾನ ಮತ್ತು ಕಿರುತೆರೆ ಕಲಾವಿದೆ ನಾಗಶ್ರೀ ಜಿ. ಎಸ್. ವಿಷೇಷ ಅತಿಥಿಯಾಗಿ ಅಂಬೆಯ ಪಾತ್ರದಲ್ಲಿ ತನ್ನ ಅದ್ಬುತ ನಾಟ್ಯ ಮತ್ತು ಅಭಿನಯದ ಮೂಲಕ ಪ್ರೇಕ್ಷಕರ ಕರತಾಡನಕ್ಕೆ ಭಾಜನರಾದರು. ಸಾಲ್ವನಾಗಿ ಸಿಡಿಲಬ್ಬರದಿಂದ ಕೊಡ್ಲಾಡಿ ಅಶೋಕ್ ಶೆಟ್ಟಿ ಗಮನಸೆಳೆದರು.
ಪರಶುರಾಮನಾಗಿ ಡಾ. ರಾಜಾರಾಮ್ ಶೆಟ್ಟಿ, ಪ್ರತಾಪಸೇನನಾಗಿ ವಕೀಲರಾದ ರಾಘವೇಂದ್ರ ಚರಣ್ ನಾವಡ, ವೃದ್ದ ಬ್ರಾಹ್ಮಣ ಮತ್ತು ದೇಶಾಧಿಪಾಲ ಭಣ್ಣದ ವೇಷದಲ್ಲಿ ರಾಘವೇಂದ್ರ ಗೋಪಾಡಿ, ದೇಶಾಧಿಪಾಲರಾಗಿ ವೆಂಕಟೇಶ್ ನಾವುಂದ, ಸರ್ವೋದಯ ಪೂಜಾರಿ, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ಅಂಬೆಯಾಗಿ ಕುಮಾರ ಧನ್ವಿಶ್, ಅಂಬಾಲಿಕೆಯಾಗಿ ಕುಮಾರ ವಿನ್ಯಾಸ್ ಗಮನಸೆಳೆದರು.
ಯಕ್ಷಗಾನವನ್ನು ಮಂಜುನಾಥ್ ಕುಲಾಲ್ ಐರೋಡಿ ನಿರ್ದೇಶನ ಮಾಡಿದ್ದರು. ರೋಟರಿ ಕುಂದಾಪುರದ ಅಧ್ಯಕ್ಷರಾದ ಲಿಯಾಕತ್ ಅಲಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ರೊ ಸಚ್ಚಿದಾನಂದ ಎಮ್.ಎಲ್ ವಂದಿಸಿದರು.