ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಸಾಹಿತ್ಯ ಪರಿಷತ್ತಿನ 19ನೇ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊಫೆಸರ್ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಅವರ ಮನೆಯಲ್ಲಿ ವಿದ್ಯುಕ್ತವಾಗಿ ಆಮಂತ್ರಣ ಪತ್ರವನ್ನು ನೀಡುವುದರ ಮುಖೇನ ಸಮ್ಮೇಳನಕ್ಕೆ ಆಹ್ವಾನಿಸಿ ಯಶಸ್ವಿಯಾಗಿ ನಡೆಸಿಕೊಡಲು ಕೋರಿಕೊಂಡರು.
ಆಹ್ವಾನ ಸ್ವೀಕರಿಸಿದ ಪ್ರೊಫೆಸರ್ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡುತ್ತಾ, ತಾಲೂಕಿನಲ್ಲಿ ಸಾಹಿತ್ಯ ಸೇವೆಯಲ್ಲಿ ಗಣನೀಯವಾಗಿ ತೊಡಗಿಸಿಕೊಂಡಿರುವ ಅನೇಕ ಹಿರಿಯರ ನಡುವೆ ನನ್ನನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಂತೆ ಸಾಹಿತ್ಯ ಸಮ್ಮೇಳನವನ್ನು ಬಹು ಜವಾಬ್ದಾರಿಯಿಂದ ಅಧ್ಯಕ್ಷತೆ ವಹಿಸಿ ನಡೆಸಿಕೊಡುತ್ತೇನೆಂದು ಹೇಳಿದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಉಡುಪಿ ತಾಲೂಕು ಸಮ್ಮೇಳನದ ಪೂರ್ವ ಅಧ್ಯಕ್ಷರಾದ ಪ್ರೊಫೆಸರ್ ಉಪೇಂದ್ರ ಸೋಮಯಾ ಜಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಹೇಶ್ ಹೆಗ್ಡೆ ಮೊಳಹಳ್ಳಿ, ಆರ್ಥಿಕ ಸಮಿತಿಯ ಅಧ್ಯಕ್ಷರಾದ ಯಡಾಡಿ ಅರುಣ್ ಕುಮಾರ್ ಹೆಗ್ಡೆ, ತಾಲೂಕು ಘಟಕದ ಅಧ್ಯಕ್ಷರಾದ ಡಾಕ್ಟರ್ ಉಮೇಶ್ ಪುತ್ರನ್, ಕಾರ್ಯದರ್ಶಿಗಳಾದ ದಿನಕರ ಆರ್ ಶೆಟ್ಟಿ, ಅಕ್ಷತಾ ಗಿರೀಶ್, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.