Site icon Kundapra.com ಕುಂದಾಪ್ರ ಡಾಟ್ ಕಾಂ

ಗುಜ್ಜಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿವೇಕ ಕೊಠಡಿ ಉದ್ಘಾಟನೆ

oplus_2

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಎಲ್ಲಾ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದು ಸರಕಾರದಿಂದ ಅಸಾಧ್ಯವಾಗಿದ್ದು, ದಾನಿಗಳು ಹಾಗೂ ವಿದ್ಯಾಭಿಮಾನಿಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆದು ಆ ಶಾಲೆಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಿದೆ. ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಬೈಂದೂರು ವಲಯದಲ್ಲಿ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಮಾದರಿ ಶಾಲೆ ಎನಿಸಿಕೊಂಡಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಸುಮಾರು 13.9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿವೇಕ ಕೊಠಡಿಗಳನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

ಗುಜ್ಜಾಡಿ ಶಾಲೆಗೆ ಅಗತ್ಯವಾಗಿ ಬೇಕಿರುವ ಮೂರು ವಿವೇಕ ಕೊಠಡಿಗಳು ಮಂಜೂರಾಗಿರುವುದು ವಿಶೇಷವಾಗಿದ್ದು, ದಾನಿಗಳ ಸಹಕಾರದಿಂದ ಶಾಲೆ ಪ್ರಗತಿ ಪಥದತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಟಿ. ಪೂಜಾರಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಶುಭಾಶಂಸನೆಗೈದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ದಾನಿಗಳಾದ ದಯಾಕರ ಮೇಸ್ತ, ಪದ್ಮಾವತಿ ಡಿ. ಮೇಸ್ತ, ಐಶ್ವರ್ಯ ಡಿ. ಮೇಸ್ತ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ ಎಲ್. ಮೇಸ್ತ, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ ಮೇಸ್ತ, ತುಂಗ ಪೂಜಾರಿ, ಶ್ರೀಧರ, ಶಿಕ್ಷಣ ಸಂಯೋಜಕ ಯೋಗೀಶ್, ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ ಬಂಟ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.

ಸಹಶಿಕ್ಷಕ ವಿಶ್ವನಾಥ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version