Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಣ ದೇವಸ್ಥಾನದಲ್ಲಿ ಸ್ನೇಹ ಸಮ್ಮಿಲನ ಸಮಾರಂಭ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಅಗ್ನಿ ದಿವ್ಯದಲ್ಲಿ ಸ್ಪುಟಗೊಂಡು ಬಂಗಾರ ಮೆರುಗು ಪಡೆಯುವಂತೆ ಸಂಘರ್ಷದ ಕುಲುಮೆಯಲ್ಲಿ ಹದಗೊಂಡು ಲೋಕಕ್ಕೆ ಮಾದರಿಯಾಗ ಹೊರಟ ಸಮಾಜವಿದ್ದರೆ ಅದು ಗೌಡಸಾರಸ್ವತ ಸಮಾಜ. ತಮ್ಮ ಬುದ್ಧಿ ಚಾತುರ್ಯದಿಂದ ರಾಜಾಶ್ರಯಗಳಿಸಿ ವ್ಯಾಪಾರ ವಹಿವಾಟುಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ಕೊಂಕಣಿ ಸಮಾಜ ಸಾಮಾಜಿಕವಾಗಿ ಬದುಕಿದಷ್ಟು ಬೇರೆ ಯಾವ ಸಮಾಜವೂ ಬದುಕಿಲ್ಲ ಎಂದು ಶಿರಾಲಿ ಎಸ್‌ಜಿಎಂ ದೇವಳದ ಅಧ್ಯಕ್ಷ ಗೋಪಿನಾಥ ಕಾಮತ್ ಹೇಳಿದರು.

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಇಲ್ಲಿನ ಯುವ ಜಿಎಸ್‌ಬಿ ಸೇವಾ ಸಂಘ ಆಯೋಜಿಸಿರುವ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋವಾ ಪೋರ್ಚುಗೀಸರ ವಶವಾದ ಮೇಲೆ ಅಲ್ಲಿನ ಹಿಂದೂಗಳ ದುರ್ದಿನಗಳು ಆರಂಭಗೊಂಡು ಲಕ್ಷಾಂತರ ಕುಟುಂಬಗಳು ಬಲಾತ್ಕಾರದ ಮತಾಂತರಕ್ಕೆ ಒಳಗಾದವು. ಕೇಳದವರನ್ನು ಜೀವಂತ ಸುಡಲಾಯಿತು. ಒಂದಷ್ಟು ಜನ ತಮ್ಮ ಹುಟ್ಟೂರನ್ನು ತೊರೆದು ಕುಲದೇವರ ಪೀಠಗಳನ್ನು ಹೊತ್ತು ರಾತೋರಾತ್ರಿ ವಲಸೆ ಹೊರಟರು ಈ ಮಹಾವಲಸೆ ಕೇರಳದ ಕೊಚ್ಚಿಯವರೆಗೂ ಸಾಗಿತು. ಸ್ಥಳೀಯ ಸಂಸ್ಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಕೊಂಕಣರು ಬದುಕು ಕಟ್ಟಿಕೊಂಡರು ಎಂದು ಇತಿಹಾಸವನ್ನು ಸ್ಮರಿಸಿಕೊಂಡರು.

ಭಜನ್ ಗಾಯಕ ಉಪ್ಪುಂದ ರಾಜೇಶ ಪಡಿಯಾರ, ದೇವಳದ ಮಾಜಿ ಮೇನೇಜರ್ ಬೆಳ್ಗಲ್‌ಕಟ್ಟೆ ರತ್ನಾಕರ ಪ್ರಭು ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  • ಗೌಡ ಸಾರಸ್ವತರು ಉಳಿದವರನ್ನು ಜೊತೆ ಸೇರಿಸಿಕೊಳ್ಳುವುದಿಲ್ಲ ಎಂದು ಆರೋಪಿಸುತ್ತಾರೆ. ಆದರೆ ಹಿಂದುಳಿದವರನ್ನು ಮುಖ್ಯ ವಾಹಿನಿಯ ಜೊತೆ ಜೋಡಿಸಬೇಕು ಎಂಬ ಏಕೈಕ ಉದ್ಧೇಶದಿಂದ ಕರಾವಳಿಯ ಎಲ್ಲಾ ಕಡೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಿಸುವಲ್ಲಿ ಜಿಎಸ್‌ಬಿ ಸಮಾಜದ ಹಿರಿಯರ ಪಾತ್ರ ದೊಡ್ಡದು. ಅವರು ಉದ್ಯೋಗ, ವ್ಯವಹಾರ, ಸಂಸ್ಕಾರ ಎಲ್ಲಾ ವಿಚಾರದಲ್ಲೂ ಊರ ಹತ್ತು ಸಮಸ್ತರ ನಡುವೆ ಬದುಕಿದ್ದಾರೆ. – ಕೆ. ವೆಂಕಟೇಶ ಕಿಣಿ ಬೈಂದೂರು

ಈ ಸಂದರ್ಭದಲ್ಲಿ ಉದ್ಯಮಿ ಯು. ರಾಮಚಂದ್ರ ಪ್ರಭು, ಕುಂಜಾಲು ವೆಂಕಟೇಶ ಕಿಣಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ ಇದ್ದರು. ಸಂಘದ ಅಧ್ಯಕ್ಷ ಯು. ರಾಮಚಂದ್ರ ಪಡಿಯಾರ್ ಪ್ರಾಸ್ತಾವಿಸಿದರು. ಓಂಗಣೇಶ್ ಕಾಮತ್ ನಿರೂಪಿಸಿ, ಅರ್ಚಕ ಯು. ವಿನಾಯಕ ಭಟ್ ವಂದಿಸಿದರು.

Exit mobile version