ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಮತ್ತು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ಈ ವರ್ಷವೂ ಸಹ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳು ಜರುಗಿದವು.
ಕುಂದಾಪುರ ಮತ್ತು ಬೈಂದೂರು ತಾಲೂಕಿಗೊಳಪ್ಪಟ್ಟ ಸುಮಾರು 30ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ̧1265ಕ್ಕೂ ಹೆಚ್ಚು ಸ್ಪರ್ಧಿಗಳು 20 ಸಾಂಸ್ಕೃತಿಕ, 10 ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಕರಾಮತ್ತನ್ನು ಪ್ರದರ್ಶಿಸಿದರು.
ಮುಂಜಾನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳೂ, ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶಾಲೆ ನಡೆದು ಬಂದ ಹಾದಿ, ಸ್ಪರ್ಧೆಗಳನ್ನು ನಡೆಸಿಕೊಂಡು ಬಂದ ರೀತಿನೀತಿಗಳನ್ನು ತಿಳಿಸಿದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಕುಂದಾಪುರದ ತಹಶೀಲ್ದಾರರಾದ ಶೋಭಾಲಕ್ಷ್ಮೀ ಗ್ರಾಮೀಣಪ್ರದೇಶದಲ್ಲಿ ವಿದ್ಯಾರ್ಜನೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಿರುವುದರ ಬಗ್ಗೆ ಹರ್ಷವನ್ನು ವ್ಯಕ್ತಪಡಿಸುತ್ತಾ “ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸಾಂಸ್ಕೃತಿಕ ಕ್ರೀಡಾ ಪ್ರತಿಭೆಯನ್ನು ಹೊರತರಲು ಇಂತಹ ಸ್ಪರ್ಧೆಗಳು ಬಹಳ ಸಹಕಾರಿಯಾಗಿವೆ. ಈ ಸ್ಪರ್ಧೆಗಳಲ್ಲಿ ತಾಲೂಕಿನ ಎಲ್ಲಾ ಶಾಲೆಗಳೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರ ಸದುಪಯೋಗವು ತಾಲೂಕಿನ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ತಲುಪಬೇಕು.” ಎಂದರು.
ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡುತ್ತಾ “ಪುಸ್ತಕ ಜ್ಞಾನದ ಜೊತೆಯಲ್ಲಿ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಜ್ಞಾನವು ವಿದ್ಯಾರ್ಥಿಗಳಿಗೆ ದೊರೆಯಬೇಕಾದುದು ಅತ್ಯಂತ ಅಗತ್ಯವಾದುದಾಗಿದೆ. ಆ ನಿಟ್ಟಿನಲ್ಲಿ ವೇದಮೂರ್ತಿ ಹೆಚ್ ರಾಮಚಂದ್ರ ಭಟ್ಟರು ಆರಂಭಿಸಿರುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಸಾಗಬೇಕು. ಇದರಿಂದ ವಿದ್ಯಾರ್ಥಿ ಸಂಕುಲಕ್ಕೆ, ಸಮಾಜಕ್ಕೆ ಬಹಳಷ್ಟು ಪ್ರಯೋಜನಗಳಿವೆ” ಎಂದು ಅಭಿಪ್ರಾಯಪಟ್ಟರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದು, ಇವುಗಳಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿಗೊಳಪ್ಪಟ್ಟ ಸುಮಾರು 50ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 1270ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಕರಾಮತ್ತನ್ನು ಪ್ರದರ್ಶಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವೇದಮೂರ್ತಿ ಅನಂತೇಶ ಭಟ್ಟರು ಮಾತನಾಡುತ್ತಾ, “ಜೋಗ ಜಲಪಾತದಲ್ಲಿ ಹರಿವ ನೀರನ್ನು ನೋಡಿದಾಗ ಎಲ್ಲರಂತೆ ಆನಂದಿಸದೆ, ಸರ್. ಎಮ್. ವಿಶ್ವೇಶ್ವರಯ್ಯ ಅವರು ಸುಮ್ಮನೆ ಪೋಲಾಗುತ್ತಿದೆ ಎಂದು ಆಲೋಚಿಸಿದ್ದರ ಪರಿಣಾಮ ಇವತ್ತು ಎಷ್ಟೊಂದು ಕೃಷಿಭೂಮಿಗೆ ನೀರಿನ ವ್ಯವಸ್ಥೆಗಳಾದವು, ವಿದ್ಯುದುತ್ಪಾದನೆಯೇ ಮೊದಲಾದ ಸಾಧನೆಗಳಾದವು. ಅದರಂತೆ ಪ್ರತಿಯೊಬ್ಬನೂ ಸಮಾಜದ ಕುರಿತಾಗಿ ಹಿತಚಿಂತನೆ ನಡೆಸಿ, ಸಾಧನೆಗೈಯಲು ಭರತಭೂಮಿ ಯೋಗ್ಯವಾಗಿದೆ. ಯಾವ ಕ್ಷೇತ್ರ ಎನ್ನುವುದು ಮುಖ್ಯವಲ್ಲ, ಆ ಕ್ಷೇತ್ರದಲ್ಲಿ ಅರಿತು ಸಾಧಿಸುವುದು ಮುಖ್ಯ. ಬಹುಮಾನ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ” ಎಂದು ಭಗವದ್ಗೀತಾಧ್ಯಯನದ ಉದಾಹರಣೆಯ ಮೂಲಕ ಕಿವಿಮಾತುಗಳನ್ನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ರಾಜೇಶ್ ಶ್ಯಾನುಭಾಗ್ ಮಾತನಾಡುತ್ತಾ, “ಈ ಶಾಲೆಯಲ್ಲಿ ಪ್ರೀತಿ ವಿಶ್ವಾಸಗಳು ಜೀವನಾಡಿಗಳಾದುದರಿಂದ ಇಲ್ಲಿ ಸಂತೋಷ ಮತ್ತು ಸಮೃದ್ಧಿ ನಮಗೆ ಕಾಣಿಸುತ್ತಿವೆ. ಸ್ಪರ್ಧೆಗಳಲ್ಲಿ ಎಲ್ಲರನ್ನೂ ಸಮಾನವಾಗಿ ಪರೀಕ್ಷಿಸುತ್ತೇವೆ. ಆದರೆ ಭಗವಂತ ಜೀವನದಲ್ಲಿ ಪ್ರತಿಯೊಬ್ಬರನ್ನೂ ಬೇರೆ ಬೇರೆ ರೀತಿಯಲ್ಲಿ ಪರೀಕ್ಷಿಸುತ್ತಾನೆ. ಪರೀಕ್ಷೆಗಳನ್ನು ಎದುರಿಸಬೇಕು ಮತ್ತು ಬದುಕಿನಲ್ಲಿ ಸಾಧನೆ ಮಾಡಬೇಕು. ಎಲ್ಲರ ಸಾಧನೆಯನ್ನೂ ಸಮಾಜ ಗುರುತಿಸುವುದು ಎಂದು ಯಾವುದೇ ಖಾತ್ರಿ ಇಲ್ಲ. ಆದರೆ ಭಗವಂತ ಎಲ್ಲರ ಸಾಧನೆಯನ್ನೂ ಗುರುತಿಸುತ್ತಾನೆ. ಆ ವಿಶ್ವಾಸದಿಂದ ಉತ್ತಮ ಕಲೆಗಳನ್ನು ಅಭ್ಯಸಿಸಿ, ಮುಂದಡಿ ಇಡಬೇಕು.” ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಬಾಲಚಂದ್ರ ಭಟ್ಟರು ಸಮಾರೋಪ ಸಮಾರಂಭದ ಅಧ್ಯಕ್ಷೀಯ ನುಡಿಗಳಲ್ಲಿ “ ಗಣಿಗಳಲ್ಲಿ ಮಣ್ಣನ್ನು ಅಗೆದು ಅದನ್ನು ಸಂಸ್ಕರಿಸುತ್ತಾ ಕೊನೆಗೆ ಚಿನ್ನವನ್ನು ಪಡೆವಂತೆ, ಮಕ್ಕಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಯೋಗ್ಯವಾದ ವೇದಿಕೆಗಳನ್ನು ಒದಗಿಸಿ, ಚೆನ್ನಾಗಿ ಸಂಸ್ಕರಿಸಿದಾಗಷ್ಟೇ ದೇಶವನ್ನೇ ಬೆಳಗುವ ಬೆಳಕಾಗುತ್ತಾರೆ. ರೂಬಿಕ್ ಕ್ಯೂಬ್ ನಲ್ಲಿ ನಮ್ಮ ಶಾಲೆಯ ಮಕ್ಕಳು ಸಾಧಿಸಿದ ದಾಖಲೆಗಳೇ ಇದಕ್ಕೆ ಸಾಕ್ಷಿ. ತನ್ನ ಕರ್ತವ್ಯ ಯಾವುದೆಂದು ಅರಿತು ಅದರಂತೆ ನಡೆಯಬೇಕೆಂದು ಭಗವದ್ಗೀತೆ ತಿಳಿಸುತ್ತದೆ. ಅದರಂತೆ ಪ್ರತಿಯೊಬ್ಬನೂ ನಡೆದರೆ, ಸಾಧನೆಯ ಶಿಖರವನ್ನೇರಬಹುದೆಂದು ತಿಳಿಸಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಸ್ತಾಂತರಿಸಿದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ ಕುಂದಾಪುರದ ಹೆಚ್.ಎಂ.ಎಂ. ಇಂಗ್ಲೀಷ್ ಮೀಡಿಯಂ ಪ್ರೈಮರಿ ಸ್ಕೂಲ್, ಕುಂದಾಪುರದ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕಿರಿಮುಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್, ಶುಭದಾ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರದ ವಿ. ಕೆ. ಆರ್ ಆಚಾರ್ಯ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಈ ಶಾಲೆಗಳಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಹಟ್ಟಿಅಂಗಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ವಿದ್ಯಾಶ್ರೀ ಮೊಗವೀರ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ನಲವತ್ತಕ್ಕೂ ಅಧಿಕ ಪರಿಣತ ತೀರ್ಪುಗಾರರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ಬಳಗದವರು ಉಪಸ್ಥಿತರಿದ್ದರು.
ಸಹಶಿಕ್ಷಕ ಮಹಾದೇವ ಮತ್ತು ಸಹಶಿಕ್ಷಕಿ ಅಶ್ವಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹಶಿಕ್ಷಕ ಸಚಿನ್ ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತರ ಪಟ್ಟಿಯನ್ನು ಸಹಶಿಕ್ಷಕಿ ವಿದ್ಯಾ ಅಮೀನ್ ಹಾಗೂ ಸಹಶಿಕ್ಷಕ ಜಯಂತ್ ಶ್ಯಾನುಭಾಗ್ ವಾಚಿಸಿದರು. ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ವಂದಿಸಿದರು.