Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗಣೇಶ ಚತುರ್ಥಿ ಹಬ್ಬ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಂತಸ-ಸಡಗರದಿಂದ ಆಚರಿಸಲಾಯಿತು.

ಪ್ರಾತಃಕಾಲದಲ್ಲೇ ಶಾಲೆಯ ಹಟ್ಟಿಯಂಗಡಿ ಶಾಂತಾರಾಮ ವೇದಿಕೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಕಲ ಧಾರ್ಮಿಕ ವಿಧಿ-ವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಶ್ರೀ ಗಣೇಶನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗಣೇಶನ ಮಹಿಮೆಯನ್ನು ಸಾರುವ ಭಕ್ತಿಗೀತೆಗಳನ್ನು ಹಾಡಲಾಯಿತು. ದಕ್ಷಾ ವಯಲಿನ್ ಮತ್ತು ಕೊಳಲು ವಾದನದಿಂದ ಸಿದ್ಧಿವಿನಾಯಕನಿಗೆ ಗೀತನಮನವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಕೃತ ಶಿಕ್ಷಕರಾದ ರಾಮಕೃಷ್ಣ ಉಡುಪ ವಿದಾರ್ಥಿಗಳನ್ನು ಉದ್ದೇಶಿಸಿ “ ಗಣೇಶ ಚತುರ್ಥಿ ಹಬ್ಬವು ಇಡೀ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ಭಜಿಸಿ, ಲೋಕಕ್ಕೆ ಒಳಿತನ್ನು ಬಯಸುವ ಸಂಕಲ್ಪದೊಂದಿಗೆ ನಮ್ಮೆಲ್ಲರಲ್ಲಿ ಒಗ್ಗಟ್ಟನ್ನು ಮೂಡಿಸುವ ಕಾರ್ಯವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತದೆ” ಎನ್ನುತ್ತಾ ಚೌತಿ ಚಂದ್ರನ ಕಥೆ ಮತ್ತು ಕೃಷ್ಣನ ಸ್ಯಮಂತಕ ಮಣಿಯ ಕಥೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 

ತದನಂತರ ವಿದ್ಯಾರ್ಥಿಗಳಿಗಾಗಿ ಮೆಹಂದಿ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ವಿವಿಧ ಮೋಜಿನ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಧಾರ್ಮಿಕ ಕ್ರಿಯಾ ವಿಧಾನಗಳ ನಂತರ ಅಪರಾಹ್ನದ ಅವಧಿಯಲ್ಲಿ ಗಣೇಶ ಮೂರ್ತಿಯನ್ನು ಪುರ ಮೆರವಣಿಗೆ ನಡೆಸಿ, ಶಾಲಾ ಬಾವಿಯಲ್ಲಿ ವಿಸರ್ಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲರಾದ ರಾಮದೇವಾಡಿಗ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಭಾಗಿಗಳಾಗಿದ್ದರು.

Exit mobile version