ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣವಾಗಿ ಐವತ್ತು ವರ್ಷಗಳು ಸಂದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು “ಸುವರ್ಣ ಸಂಭ್ರಮ-50” ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶಿರೋನಾಮೆಯಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ (ಜತ್ತ ತಾಲೂಕು, ಮಹಾರಾಷ್ಟ್ರ, ಮೈಸೂರು, ಮಂಗಳೂರು ಮತ್ತು ರಾಯಚೂರು) ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ಸೆಪ್ಟೆಂಬರ್ 24 ಮತ್ತು 25 ರಂದು ಮಂಗಳೂರಿನಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿಗಳು ಸೇರಿ “ಬಹುಸಂಸ್ಕೃತಿ ಉತ್ಸವ” ಕಾರ್ಯಕ್ರಮ ಏರ್ಪಡಿಸಿದೆ. ಇದರ ಭಾಗವಾಗಿ ಉಡುಪಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ಪ್ರೌಢ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟದ “ಕರಾವಳಿ ಕರ್ನಾಟಕದ ಬಹುಸಂಸ್ಕೃತಿಯ ಪರಂಪರೆ” ಎಂಬ ಶೀರ್ಷಿಕೆಯಡಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 3,000, ದ್ವಿತೀಯ ಬಹುಮಾನ ರೂ. 2,000, ತೃತೀಯ ಬಹುಮಾನ ರೂ. 1,000 ನಗದು ಹಾಗೂ 5 ಸಮಾಧಾನಕರ ಬಹುಮಾನಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.