ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮಲ್ಲಿನ ಸಾಮರ್ಥ್ಯಗಳು ಹುಟ್ಟಿನಿಂದ ಬರುವಂತದ್ದಲ್ಲ. ಸತತ ಪ್ರಯತ್ನದಿಂದ ಜೀವನದಲ್ಲಿ ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಗುರಿಮುಖ್ಯ ಎಂದು ಎಫ್.ಎಂ.ರೇಡಿಯೋ ಮಂಗಳೂರಿನ ಆರ್.ಜೆ. ನಯನ ಹೇಳಿದರು.
ಅವರು ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲ್‌ನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಯಾವುದೇ ಕೆಲಸ ಮಾಡಬೇಕೆಂದರೆ ಅದರಲ್ಲಿ ನಂಬಿಕೆ ಮುಖ್ಯ. ಹುಟ್ಟುವಾಗಲೇ ಮನುಷ್ಯನಿಗೆ ಪ್ರತಿಭೆ ಎನ್ನುವುದು ಬರುವುದಿಲ್ಲ. ಅದು ಮನುಷ್ಯನು ವಿಕಸನಗೊಂಡಾಗಲೇ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟ ಪ್ರತಿಭೆ ಮತ್ತು ಆಸಕ್ತಿಗಳಿರುತ್ತದೆ. ನಾವು ಅದನ್ನು ಗ್ರಹಿಸಿ ಉತ್ತಮಪಡಿಸಿಕೊಳ್ಳಬೇಕು ಎಂದು ಅವರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸೂತ್ರವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ.ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ. ಮಹೇಶ ಹೆಗ್ಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ನಿಮ್ಮ ಗುಣ ನಡತೆಯನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ. ಅದು ನಾವು ಆರಿಸಿಕೊಳ್ಳುವ ಗೆಳೆಯರಿಂದ ಬರುತ್ತದೆ. ಅದಕ್ಕಾಗಿ ವ್ಯಕ್ತಿ ಮತ್ತು ಗುಣವನ್ನು ನೋಡಿ ಗೆಳೆತನ ,ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಎಕ್ಸಲೆಂಟ್ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಅವರು ಸರ್ವರನ್ನು ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು, ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ವಂದಿಸಿದರು.