Kundapra.com ಕುಂದಾಪ್ರ ಡಾಟ್ ಕಾಂ

ಹಾಲಿನ ದರ ಹೆಚ್ಚಳದಿಂದ ಹೈನುಗಾರರಿಗೆ ಅನುಕೂಲ: ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪಶು ಆಹಾರ ಉತ್ಪನ್ನಗಳ ದರ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಹೈನುಗಾರರಿಗೆ ತೊಂದರೆಯಾಗುತ್ತಿದೆ, ಇದೀಗ ರಾಜ್ಯ ಸರ್ಕಾರ ಹಾಲಿನ ದರವನ್ನು ಸುಮಾರು 2ರೂ. ಗೆ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಿರುವುದು, ಉತ್ತಮ ಬೆಳವಣೆಗೆಯಾಗಿದ್ದು, ಇದು ಹೈನುಗಾರರಿಗೆ ವರದಾನವಾಗಲಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಹಾಗೂ ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಮೇಕೊಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಶನಿವಾರ ನಡೆದ ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ, ಕರು ಸಾಕಾಣಿಕೆ ಯೋಜನೆಯ ನೋಂದಾಯಿತ ಕರುಗಳ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಹಾಲು ಉತ್ಪಾದಕರ ಸಹಕಾರಿ ಸಂಘವು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಸುಮಾರು 70ಲಕ್ಷ ಸ್ಥಿರಾಸ್ತಿಯನ್ನು, ಸುಮಾರು 20ಲಕ್ಷ ರೂ. ನಿರಖು ಠೇವಣೆಯನ್ನು ಹೊಂದಿದೆ. ಕಳೆದ ಸಾಲಿನಲ್ಲಿ ಹಾಲು ಉತ್ಪಾದನೆಗಾಗಿ ಸುಮಾರು 2.28ಕೋಟಿ ರೂ. ಒಕ್ಕೂಟದಿಂದ ಸಂದಾಯವಾಗಿದೆ. ಸುಮಾರು 40ಲಕ್ಷ ರೂ. ಮೌಲ್ಯದ ಕಟ್ಟಡವನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ 8.50 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಅದರಲ್ಲಿ ಸದಸ್ಯರಿಗೆ ಶೇ: 65ರಷ್ಟು ಬೋನಸ್ ನೀಡಲಾಗಿದೆ. ಕಳೆದ ಬಾರಿ ಒಕ್ಕೂಟದಿಂದ ನಾಲ್ಕು ಪ್ರಶಸ್ತಿಗಳು ನಮ್ಮ ಸಂಘಕ್ಕೆ ಲಭಿಸಿದೆ ಎಂದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಮಾಧವ ಐತಾಳ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ, ಇಲ್ಲಿ ಸುಮಾರು 5ಲಕ್ಷ ಲೀ. ಹಾಲಿಗೆ ಬೇಡಿಕೆಯಿದ್ದು, ಕೇವಲ 3ಲಕ್ಷ ಲೀ. ಹಾಲು ಮಾತ್ರ ಉತ್ಪಾದನೆಯಾಗುತ್ತದೆ, ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಂದ ಖರೀದಿಸಲಾಗುತ್ತದೆ ಎಂದರು.

ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಧಿಕ ಹಾಲು ಒಕ್ಕೂಟದ ವತಿಯಿಂದ ಕರುಗಳ ಸಾಕಾಣಿಕೆ ಯೋಜನೆ, ಜಾನುವಾರುಗಳಿಗೆ ಇನ್ಸೂರೆನ್ಸ್, ಮಿನಿ ಡೈರಿ ಯೋಜನೆ, ಹುಲ್ಲು ಬೆಳೆಯಲು ಯೋಜನೆ, ಅಲ್ಲದೇ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ ಖರೀದಿ ಹಾಗೂ ಸದಸ್ಯರು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತ ಕಲ್ಯಾಣ ನಿಧಿಯಿಂದ ಅವರ ಕುಟುಂಬಕ್ಕೆ ಸುಮಾರು 50 ಸಾವಿರ ರೂ. ಅನುದಾನ ನೀಡುವುದು ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ, ಸದಸ್ಯರು ಗರಿಷ್ಠ ಪ್ರಮಾಣದಲ್ಲಿ ಇದರ ಲಾಭವನ್ನು ಪಡೆಯುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದರು.

ಹೇರೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಕರುಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಗ್ರಾ.ಪಂ. ಸದಸ್ಯರಾದ ಸತೀಶ ಶೆಟ್ಟಿ, ಬಾಬು ಆಚಾರ್ಯ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ದಕ ಒಕ್ಕೂಟದ ಪಶು ವೈದ್ಯೆ ಡಾ. ಶೃದ್ಧಾ ಖಾರ್ವಿ, ಒಕ್ಕೂಟದ ವಿಸ್ತರಣಾಕಾರಿ ರಾಜಾರಾಮ, ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಸಂತೋಷ ಗೌಡ, ನಿರ್ದೇಶಕರಾದ ಗೋಪಾಲ ಶೆಟ್ಟಿ, ಎನ್. ಪದ್ಮನಾಭ ಅಡಿಗ, ವೈ. ಜಯರಾಮ ಹೆಬ್ಬಾರ್, ವೈ. ಗೋವಿಂದ ಹೆಬ್ಬಾರ್, ಎಂ.ಎನ್. ಬಾಬು ಪೂಜಾರಿ, ಭಾಸ್ಕರ ದೇವಾಡಿಗ, ಉಮೇಶ ಪೂಜಾರಿ, ಕುಷ್ಟು ಯರೊಕೋಣೆ, ಲೀಲಾವತಿ ಪೂಜಾರಿ, ಸುಶೀಲ ಗಾಣಿಗ, ಗೌರಿ ಬಿ. ಉಪಸ್ಥಿತರಿದ್ದರು.

ಈ ಸಂದರ್ಭ ಕಳೆದ ವರ್ಷ ಒಂದು ಲಕ್ಷ ಲೀ. ಗೂ ಅಧಿಕ ಹಾಲು ಪೂರೈಸಿದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹಾಗೂ 50 ಸಾವಿರ ಲೀ. ಗೂ ಅಧಿಕ ಹಾಲು ಪೂರೈಸಿದ ಸಂಘದ ಉಪಾಧ್ಯಕ್ಷ ಸಂತೋಷ ಗೌಡ ಅವರನ್ನು ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಪೂರೈಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ನೇತ್ರಾವತಿ ಪ್ರಾರ್ಥಿಸಿದರು, ಸಂಘದ ಕಾರ್ಯದರ್ಶಿ ಕುಶಲ ಗಾಣಿಗ ಸ್ವಾಗತಿಸಿದರು, ದಿನೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version