Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲದ ರಜತ ರಥಕ್ಕೆ ವೈಭವದ ಪುರಮೆರವಣಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕೊಟೇಶ್ವರದ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ಭಕ್ತರು ಹಾಗೂ ದಾನಿಗಳು ನೀಡಿದ 125ಕೆ.ಜಿ ತೂಕದ ಬೆಳ್ಳಿಯಿಂದ 1.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ರಜತ ರಥವನ್ನು ಭವ್ಯ ಪುರಮೆರವಣಿಗೆಯೊಂದಿಗೆ ಭಾನುವಾರ ದೇಗುಲಕ್ಕೆ ಕೊಂಡೊಯ್ಯಲಾಯಿತು.

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಜತ ರಥದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕುಂಭಾಶಿ, ಗೋಪಾಡಿ, ಬೀಜಾಡಿ, ಕೋಟೇಶ್ವರ, ಅಂಕದಕಟ್ಟೆ ಮೂಲಕ ದೇಗುಲಕ್ಕೆ ರಥವನ್ನು ಕೊಂಡೊಯ್ಯಲಾಯಿತು.

ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ತಟ್ಟಿರಾಯ, ಕೀಲು ಕುದುರೆ, ಟ್ಯಾಬ್ಲೊ, ಚಂಡೆ ವಾದನ ಸಹಿತ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಸಾಗಿಸಿ ಪೂಜೆ ಸಲ್ಲಿಸಲಾಯಿತು. ಸೆ.16ರ ರಾತ್ರಿ ರಜತರಥ ಸಮರ್ಪಣೆ ನಡೆಯಿಲಿದೆ.

ದೇವಾಲಯದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಮೆರವಣಿಗೆಯಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

1.25 ಕೋಟಿ ವೆಚ್ಚದ ರಜತ ರಥವನ್ನು ಭಕ್ತರು ಹಾಗೂ ದಾನಿಗಳು ಸಹಕಾರದೊಂದಿಗೆ ನಿರ್ಮಿಸಲಾಗಿದ್ದು, ರಥಶಿಲ್ಪಿ ರಾಜಗೋಪಾಲ ಆಚಾರ್ಯ ರಥವನ್ನು ನಿರ್ಮಿಸಿದ್ದಾರೆ.

Exit mobile version