Kundapra.com ಕುಂದಾಪ್ರ ಡಾಟ್ ಕಾಂ

ಜ್ಞಾನ ಹೆಚ್ಚಿಸಿಕೊಳ್ಳಲು ಇರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು: ಡಾ. ನಾರಾಯಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉತ್ತಮ ಶೈಕ್ಷಣಿಕ ಜ್ಞಾನ ಮತ್ತು ಸಂಶೋಧನಾ ಪ್ರವೃತ್ತಿಯು ಶಿಕ್ಷಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇದರ (ತಂತ್ರಜ್ಞಾನ ಮತ್ತು ವಿಜ್ಞಾನ) ಉಪಕುಲಪತಿ ಡಾ. ನಾರಾಯಣ ಸಭಾಹಿತ ಹೇಳಿದರು.

ಅವರು ಶನಿವಾರದಂದು ಕುಲಪತಿಗಳ ಹುಟ್ಟಿದ ಹಬ್ಬದ ಪ್ರಯುಕ್ತ ನಡೆದ ಎ.ಜಿ.ಇ ಅಧೀನ ಕಾಲೇಜುಗಳ ಮೂರನೇ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

 ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇರುವಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಧೀನ ಕಾಲೇಜುಗಳ ಉಪನ್ಯಾಸಕರುಗಳಿಗೆ ಒಳ್ಳೆಯ ಅವಕಾಶವಿದೆ. ಅವರುಗಳು ದೇಶದಲ್ಲಿ  ಅತ್ಯುತ್ತಮ  ಗುಣಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಾಹೆಯಲ್ಲಿ ಶೈಕ್ಷಣಿಕ ಜ್ಞಾನ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಈ ಮೂಲಕ ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು. ಅಲ್ಲದೆ ಎ.ಜಿ.ಇ ಅಧೀನ  ಕಾಲೇಜುಗಳೊಂದಿಗೆ ಉತ್ತಮ ಸಂಪರ್ಕ ಕಲ್ಪಿಸುವುದು ಮತ್ತು ಮಾಹಿತಿ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಬೆಳೆಯಬಹುದು ಎಂದು ಹೇಳಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮಣಿಪಾಲ ಇದರ ಸಿ.ಓ.ಓ ಡಾ.ರವಿರಾಜ್ ಎನ್.ಎಸ್  ಕೌಶಲ್ಯಾಭಿವೃದ್ಧಿ ಕುರಿತು ತಿಳಿಸಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಕಾರ್ಯದರ್ಶಿ ವರದರಾಯ ಪೈ ಮಾತನಾಡಿ ಎ.ಜಿ.ಇ. ಅಧೀನ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸುವಂತಾಗಬೇಕು. ಹೊಸ ಹೊಸ ಪ್ರಯೋಗಗಳನ್ನು ಕೋರ್ಸ್ ಗಳನ್ನು ಪರಿಚಯಿಸುವ ಮೂಲಕ  ನಿಮ್ಮ ಶಿಕ್ಷಣ ಸಂಸ್ಥೆಯನ್ನು ವಿಶಿಷ್ಟವಾಗಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಟಿ.ಎಂ ಎ ಪೈ ಮತ್ತು ಡಾ.ಎ. ಎಸ್.ಭಂಡಾರ್ಕಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು.

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಶರಣ್ ಕಾರ್ಯಕ್ರಮ ನಿರೂಪಿಸಿದರು.

Exit mobile version