Kundapra.com ಕುಂದಾಪ್ರ ಡಾಟ್ ಕಾಂ

ಆನ್‌ಲೈನ್‌ ವಂಚನೆ: ಪೊಲೀಸರ ಹೆಸರಿನಲ್ಲಿ ಕುಂದಾಪುರದ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪೊಲೀಸರ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಕುಂದಾಪುರದ ಹಂಗಳೂರಿನ ಭವಿಷ್ಯ ಎ. (30) ವಂಚನೆಗೆ ಒಳಗಾದವರು.

ಮಹಿಳೆಗೆ ಕರೆ ಮಾಡಿದ ವ್ಯಕ್ತಿಯು ಫೆಡೆಕ್ಸ್‌ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಭವಿಷ್ಯ ಅವರ ಆಧಾರ್‌ ನಂಬರ್‌ನಿಂದ ಮುಂಬಯಿಯಿಂದ ಇರಾನ್‌ಗೆ ಒಂದು ಪಾರ್ಸೆಲ್‌ ಹೋಗುತ್ತಿದ್ದು, ಅದರಲ್ಲಿ ಕಾನೂನುಬದ್ಧವಲ್ಲದ ವಸ್ತುಗಳು ಇರುವುದರಿಂದ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದ. ಸೈಬರ್‌ ಕ್ರೈಂಗೆ ದೂರು ನೀಡುವಂತೆ ತಿಳಿಸಿ ಮುಂಬಯಿ ಕ್ರೈಂ ಬ್ರ್ಯಾಂಚ್‌ಗೆ ಕರೆ ಸಂಪರ್ಕಗೊಳಿಸುವುದಾಗಿ ಹೇಳಿ, ಮಹಿಳೆಯೊಂದಿಗೆ ಮಾತನಾಡಿದ್ದಾನೆ.

ಭವಿಷ್ಯ ಅವರ ಆಧಾರ್‌ ಕಾರ್ಡ್‌ ಇತ್ಯಾದಿ ವಿವರಗಳನ್ನು ಕಳುಹಿಸುವಂತೆ ತಿಳಿಸಿ, ಆಧಾರ್‌ ನಂಬರ್‌ನಿಂದ 25 ಬ್ಯಾಂಕ್‌ ಆಕೌಂಟ್‌ ಇದ್ದು, ನಿಮ್ಮ ಖಾತೆಯಿಂದ ಮನಿ ಲ್ಯಾಂಡರಿಂಗ್‌ ಆಗುತ್ತಿರುವುದಾಗಿ ಹೇಳಿದ್ದಾರೆ. ಆ ಅಕೌಂಟ್‌ನಿಂದ ಇನ್‌ಸ್ಟಂಟ್‌ ಲೋನ್‌ ಮಾಡಿದರೆ ಮೋಸಗಾರರನ್ನು ಪತ್ತೆ ಮಾಡಬಹುದು ಎಂದು ಯಾಮಾರಿಸಿ 8,78,760 ರೂ. ಲೋನ್‌ ಮಾಡಿಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣ ಉಪಯೋಗಿಸಿಕೊಂಡು ಭವಿಷ್ಯ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 8,87,307 ರೂ. ಅನ್ನು ವಂಚಕರು ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version