Kundapra.com ಕುಂದಾಪ್ರ ಡಾಟ್ ಕಾಂ

ಜಡ್ಕಲ್ – ಮುದೂರು: ಕಸ್ತೂರಿ ರಂಗನ್ ವರದಿಗೆ ವಿರೋಧ – ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ, ಸಂವಾದ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಕಸ್ತೂರಿ ರಂಗನ್ ವರದಿ ಅನುಷ್ಠಾನ ಮತ್ತು ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಆತಂಕದಲ್ಲಿರುವ ಜಡ್ಕಲ್ / ಮುದೂರು ಗ್ರಾಮಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿದರು. ಬಳಿಕ ಅಲ್ಲಿನ ನಿವಾಸಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಗಂಟಿಹೊಳೆ, ಮೀಸಲು ಅರಣ್ಯ ಮತ್ತು ಬಫರ್ ಝೋನ್ ಪ್ರದೇಶಗಳಲ್ಲಿ ವಾಸಮಾಡುತ್ತಿರುವ ನಿವಾಸಿಗಳಿಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆಗಳಿಗೆ ಭಯಗೊಂಡಿರುವ  ಜಡ್ಕಲ್, ಮುದೂರು ಗ್ರಾಮದ ಜನರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಮೊದಲ ಹೋರಾಟಕ್ಕೆ ಮುನ್ನುಡಿ ಬರೆದಂತಾಗಿದೆ. ಈ ಪ್ರತಿಭಟನೆ ಕಿಚ್ಚು ಇಡೀ ಉಡುಪಿ ಜಿಲ್ಲೆಗೆ ಪಸರಿಸಿ. ಒಂದು ಜನಂದೋಲನವಾಗಿ ಪರಿವರ್ತನೆಗೊಂಡಾಗ ನಮ್ಮ ಹೋರಾಟಕ್ಕೆ ನಿಶ್ಚಿತವಾಗಿ ಫಲ ದೊರೆಯಲಿದೆ. ಈ ಹೋರಾಟದ ನಮ್ಮೆಲ್ಲರ ಹೋರಾಟವಾಗಬೇಕಿದೆ. ಯಾವುದೇ ಮಟ್ಟದ ಹೋರಾಟಕ್ಕೆ ಎಲ್ಲಿಗೆ ಕರೆದರೂ ನಿಮ್ಮ ಜೊತೆಗಿದ್ದೇನೆ ಎನ್ನುವ ಭರವಸೆ ನೀಡಿದರು.

ಪ್ರತಿಭಟನೆಗೆ ಒಂದು ವಿಶೇಷ ಶಕ್ತಿ ಇದೆ. ಪಕ್ಷಾತೀತವಾಗಿ  ಆರಂಭಗೊಂಡ ಈ ಹೋರಾಟ ಇತರ ಗ್ರಾಮದ ಜನರಿಗೂ ಮಾದರಿಯಾಗಲಿದೆ ಎಂದವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಪರಿಸರ ಸೂಕ್ಷ್ಮ ಪ್ರದೇಶವೂ ಜನವಸತಿ ಪ್ರದೇಶದಿಂದ ಹೊರಗಿರಬೇಕು. ಕಾಡಿನ ಒಳಗೆ ಹಲವಾರು ವರ್ಷ ದಿಂದ ವಾಸವಾಗಿರುವ ಕುಟುಂಬಕ್ಕೆ, ಕೃಷಿ ಜಾಗಕ್ಕೆ ಸರಿಯಾದ ಪರಿಹಾರ ಕೊಡಬೇಕು. ಸೂಕ್ಷ್ಮ ವಲಯವನ್ನು ಜೀರೋ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಶಾಸಕರ ಮುಂದಿಡಲಾಯಿತು.

Exit mobile version