Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವ್ಯವಸಾಯ ಸಹಕಾರಿ ಸಂಘ 1.45 ಕೋಟಿ ನಿವ್ವಳ ಲಾಭ: ಟಿ. ನಾರಾಯಣ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘ ಸಂಘವು ಪ್ರಧಾನ ಕಚೇರಿ ಸೇರಿದಂತೆ 9 ಶಾಖೆಗಳ ಮೂಲಕ 7 ಗ್ರಾಮಗಳ ಜನತೆಗೆ ಆರ್ಥಿಕ ವ್ಯವಹಾರ ಕಲ್ಪಿಸಿ, ಪ್ರಸಕ್ತ ಸಾಲಿನಲ್ಲಿ ಸುಮಾರು 762.59 ಕೋಟಿಗೂ ಮೀರಿ ವ್ಯವಹಾರ ನಡೆಸಿ,  ಸುಮಾರು 1.45 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು.

ಯಡ್ತರೆ ಬಂಟರ ಭವನದಲ್ಲಿ ಸೋಮವಾರ ನಡೆದ ಸಂಘದ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಠೇವಣಾತಿ ಅವಿರತವಾಗಿ ಏರುತ್ತಿದ್ದು, ವರದಿ ವರ್ಷದಲ್ಲಿ ಸುಮಾರು 3.92 ಕೋಟಿ ರೂ. ಏರಿಕೆಯಾಗಿದ್ದು, ಶೇ. 5.82ರಷ್ಟು ಹೆಚ್ಚಳವಾಗಿದೆ. ವರದಿ ವರ್ಷದ ಪ್ರಾರಂಭದಲ್ಲಿ ಸುಮಾರು 55.88ಕೋಟಿ ರೂ. ಹೊರಬಾಕಿ ಸಾಲಯಿದ್ದು, ಪ್ರಸಕ್ತ ಸಾಲಿನಲ್ಲಿ 61.42ಕೋಟಿ ರೂ. ಸಾಲ ವಿತರಿಸಲಾಗಿದೆ. ವರ್ಷಾಂತ್ಯದಲ್ಲಿ ಸದಸ್ಯರಿಂದ ಬರಬೇಕಾದ ಸಾಲಗಳ ಪೈಕಿ ಕೃಷಿ ಪೂರಕ ಸಾಲ ಶೇ. 99.72, ಕೃಷಿಯೇತರ ಸಾಲ ಶೇ. 99.60 ವಸೂಲಿಯಾಗಿ ಒಟ್ಟಾರೆ ಶೇ. 99.67 ಸಾಲ ವಸೂಲಿಯಾಗಿದೆ ಎಂದರು.

ಠೇವಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವರ್ಷ 100 ಕೋಟಿ ರೂ, ಠೇವಣೆ ಸಂಗ್ರಹಣೆಯ ಗುರಿಹೊಂದಲಾಗಿದೆ. ಸಂಘದ ಪ್ರಧಾನ ಕಚೇರಿಗೆ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ಯಡ್ತರೆಯಲ್ಲಿ 0.35 ಎಕ್ರೆ ಸ್ಥಳ ಖರೀದಿಸಿ, ಈಗಾಗಲೇ ನೀಲನಕ್ಷೆ ಸಿದ್ದಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಸಂಘದ ಉಳಿದ ಶಾಖೆಗಳಿಗೂ ನಿವೇಶನ ಖರೀದಿಸಿ, ನೂತನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಈ ಸಂದರ್ಭ ಇತ್ತೀಚಿಗೆ ನಿವೃತ್ತರಾದ ಕುಂದಾಪುರ ಸಹಕಾರಿ ಸಂಘಗಳ ಉಪನಿಬಂಧಕ ಅರುಣಕುಮಾರ್ ಎಸ್. ವಿ. ಅವರನ್ನು ಸನ್ಮಾನಿಸಲಾಯಿತು.

ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಎಸ್. ವೆಂಕ್ಟ ಪೂಜಾರಿ, ಕೃಷ್ಣ ದೇವಾಡಿಗ, ಗಿರೀಶ ಮೇಸ್ತ, ಚಿಕ್ಕು ಪೂಜಾರಿ, ವಸಂತಕುಮಾರ್ ಶೆಟ್ಟಿ, ಎನ್. ನಾಗರಾಜ ಶೆಟ್ಟಿ, ಕೃಷ್ಣ ನಾಯ್ಕ, ಶಂಕರ ನಾಯ್ಕ, ಸದಾಶಿವ ಡಿ. ಶೇರುಗಾರ್, ಟಿ. ಬಾಬು ಶೆಟ್ಟಿ, ಜ್ಯೋತಿ ಶೇರುಗಾರ್, ರಜನಿ ಶ್ಯಾನುಭಾಗ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರತಾಪಚಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.

Exit mobile version