Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರೋಟರಿ ಕ್ಲಬ್‌ನಿಂದ ನಿರ್ಮಿಸಿದ ರೈಲು ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸಮುದಾಯದ ಸೇವೆಯಲ್ಲಿ ರೋಟರಿ ಸದಾ ಮುಂಚೂಣಿಯಲ್ಲಿದ್ದು, ಸಾರ್ವಜನಿಕರಿಗೆ ಸಂಪೂರ್ಣ ಉಪಯೋಗವಾಗುವಂತಹ ಹತ್ತಾರು ಜನಪರ ಯೋಜನೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತದೆ. ಇಂತಹ ಯೋಜನೆಗಳು ಜನರಿಗೆ ನೆರವಾಗುವುದಲ್ಲದೇ, ಧೀರ್ಘಕಾಲದ ತನಕ ಅವರ ಮನಸ್ಸಿನಲ್ಲಿಯೂ ಉಳಿಯುವಂತಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್‌  ಸಿಎ ದೇವ್‌ ಆನಂದ್‌ ಹೇಳಿದರು.

ಅವರು ಮಂಗಳವಾರ ರೋಟರಿ ಕ್ಲಬ್‌ ಬೈಂದೂರು ವತಿಯಿಂದ ಇಲ್ಲಿನ ಮೂಕಾಂಬಿಕಾ ರೋಡ್‌ ರೈಲ್ವೆ ನಿಲ್ದಾಣದಲ್ಲಿ 2024-25ನೇ ಸಾಲಿನ ರೋಟರಿ ಸಾರ್ವಜನಿಕ ಸೇವೆ ಯೋಜನೆಯಡಿ ನಿರ್ಮಿಸಲಾದ ನೂತನ ರೈಲು ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆಗೊಳಿಸಿ  ಮಾತನಾಡಿ ಸಾರ್ವಜನಿಕ ವಲಯದಲ್ಲಿ ರೋಟರಿಯ ಘನತೆಯನ್ನು ಎತ್ತಿಹಿಡಿಯುವಂತಹ ಯೋಜನೆ ರೂಪಿಸಿರುವುದು ಶ್ಲಾಘನಾರ್ಹವಾದುದು ಎಂದರು.

ಕೊಂಕಣ್‌ ರೈಲ್ವೆಯ ಸೀನಿಯರ್‌ ರೀಜನಲ್‌ ಟ್ರಾಫಿಕ್‌ ಮ್ಯಾನೇಜರ್‌ ದಿಲೀಪ್‌ ಡಿ. ಭಟ್‌ ರೋಟರಿ ಮಾಹಿತಿ ಫಲಕವನ್ನು ಉದ್ಘಾಟಿಸಿದರು. ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್‌ ಅವರು ರೋಟರಿಯಿಂದ ಸಾರ್ವಜನಿಕರಿಗಾಗಿ ನೀಡಿದ 3 ಬೆಂಚುಗಳನ್ನು ಲೋಕಾರ್ಪಣೆಗೊಳಿಸಿದರು.

ರೈಲು ತಂಗುದಾಣ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮತಿ ಸುಬ್ರಾಯ ರೇವಣ್ಕರ್‌ ಶಿರೂರು ಹಾಗೂ ಕುಟುಂಬಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ರೋಟರಿ ಅಧ್ಯಕ್ಷ ಮೋಹನ್‌ ರೇವಣ್ಕರ್‌ ಅವರು ಮಾತನಾಡಿ, ಬೈಂದೂರು ರೈಲ್ವೆ ನಿಲ್ದಾಣದ ಮೂಲಕ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತೆರಳುತ್ತಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ತೆರಳುವ ಭಕ್ತರು ರೈಲು ಮಾರ್ಗವನ್ನು ಅವಲಂಭಿಸಿದ್ದಾರೆ. ಆದರೆ ಇಲ್ಲಿ ಮಳೆ ಹಾಗೂ ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ರೈಲ್ವೆ ಯಾತ್ರಿ ಸಂಘದಿಂದ ಮನವಿ ಬಂದ ಹಿನ್ನೆಲೆಯಲ್ಲಿ ದಾನಿಗಳ ನೆರವಿನಿಂದ ಸುಸಜ್ಜಿತವಾದ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭ ಸಹಾಯಕ ಗವರ್ನರ್‌ ಡಾ. ಬಿ. ರಾಜೇಂದ್ರ ಶೆಟ್ಟಿ, ಸಿಎ ರೇಖಾ ದೇವಾನಂದ್‌, ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಮಂಡಳಿಯ ಮಾಜಿ ಸದಸ್ಯ ಕೆ. ವೆಂಕಟೇಶ ಕಿಣಿ, ಬೈಂದೂರು ಟೆಂಪೋ ರಿಕ್ಷಾ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್‌ ಬಟ್ವಾಡಿ, ವಲಯ ಸೇನಾನಿ ಪ್ರದೀಪ್‌ ಡಿ.ಕೆ ಮೊದಲಾದವರು ಉಪಸ್ಥಿತರಿದ್ದರು.

ರೂಪಾ ರೇವಣ್ಕರ್‌ ಪ್ರಾರ್ಥಿಸಿದರು. ಬೈಂದೂರು ರೋಟರಿ ಅಧ್ಯಕ್ಷ ಮೋಹನ್‌ ರೇವಣ್ಕರ್‌ ಸ್ವಾಗತಿಸಿ, ಕಾರ್ಯದರ್ಶಿ ಸುನಿಲ್‌ ಹೆಚ್.‌ ಜಿ. ವಂದಿಸಿದರು. ಬೈಂದೂರು ರೋಟರಿ ಡಿಸ್ಟಿಕ್‌ ಪ್ರಾಜೆಕ್ಟ್‌ ಛೇರ್ಮನ್ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.

Exit mobile version