Site icon Kundapra.com ಕುಂದಾಪ್ರ ಡಾಟ್ ಕಾಂ

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಈಜಲು ತೆರಳಿದ್ದ ಇಲ್ಲಿನ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಯೋಜನಾನಗರ ನಿವಾಸಿ ಕೃಷ್ಣ ದೇವಾಡಿಗ ಎಂಬುವರ ಮಗ ನಾಗೇಂದ್ರ (13) ಹಾಗೂ ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಜಿ.ಎಂ ಕಂಪೌಂಡ್ ನಿವಾಸಿ ಶಾನು ಶಾಲಿಯಾನ್ ಎಂಬುವರ ಮಗ ಶಾನು ಮೊಹಮದ್ ಶಫಾನ್ (13) ಸಾವನ್ನಪ್ಪಿದ ವಿದ್ಯಾರ್ಥಿಗಳು

ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಮಂಗಳವಾರ ಪರೀಕ್ಷೆ ಮುಗಿಸಿ ಮನೆಗೆ ತೆರಳಿದ್ದರು. ಸಂಜೆ 4 ಗಂಟೆ ಸುಮಾರಿಗೆ ನಾಗೇಂದ್ರ, ಸ್ನೇಹಿತ ಶಾನು ಮೊಹಮದ್ ಶಫಾನ್ ಕೆರೆಕಟ್ಟೆಯಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ. ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬರದ್ದನ್ನು ನೋಡಿ ಕೆರೆ ಬಳಿ ಹುಡುಕಾಟ ನಡೆಸಿದಾಗ ಸೈಕಲ್, ಬಟ್ಟೆ ಹಾಗೂ ಎರಡು ಜೊತೆ ಚಪ್ಪಲಿ ಪತ್ತೆಯಾಗಿದೆ. ಬುಧವಾರ ಬೆಳಿಗ್ಗೆ 02:25ರ ವೇಳೆಗೆ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.

40 ಅಡಿ ಆಳ ಹಾಗೂ 10-20 ಅಡಿ ಸುತ್ತಳತೆ ಇರುವ ಕೆರೆಕಟ್ಟೆಯ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಮಂಗಳವಾರ ದಿನ ಮಳೆ ಇದ್ದುದರಿಂದ ಯಾರು ಈಜಲು ಬಂದಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಈಜಲು ಬಾರದ ಇಬ್ಬರು ಈಜಲು ಹೋದಾಗ ಮುಳುಗಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version