Kundapra.com ಕುಂದಾಪ್ರ ಡಾಟ್ ಕಾಂ

ಮಾದಕ ವಸ್ತುಗಳ ಸೇವನೆಯ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸಿ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಯುವಜನತೆಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ದೂರ ಉಳಿಯುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವೀಡಿಯೋ ಕಾನ್ಸ್ರೆನ್ಸ್ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯಿದೆ ಕುರಿತ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಜನತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳಿಗೆ ಮಾರು ಹೋಗಿ ತಮ್ಮ ಶಿಕ್ಷಣದಿಂದ ವಂಚಿತ ಆಗುವುದರ ಜೊತೆಗೆ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಂಡು ಭವಿಷ್ಯದ ಜೀವನವು ಉತ್ತಮವಾಗದೇ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಯುವಜನರಿಗೆ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯುವ ಹಾಗೆ ಅರಿವು ಮೂಡಿಸುವುದು ಪೋಷಕರು, ಶಾಲಾ-ಕಾಲೇಜಿನ ಶಿಕ್ಷಣ ಸಂಸ್ಥೆಯವರು ಹಾಗೂ ಸರಕಾರದ ಪ್ರತಿನಿಧಿಗಳಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದನ್ನು ಆದ್ಯತೆಯ ಮೇಲೆ ಮಾಡಬೇಕು ಎಂದರು.

ಶಾಲಾ-ಕಾಲೇಜುಗಳ ಆವರಣದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಶಿಫಾರಸು ಮಾಡಿ, ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಮಾದಕ ವಸ್ತುಗಳಿಂದ ದೂರ ವಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಹೇಳಬೇಕು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಪ್ರತಿಜ್ಞಾವಿಧಿಗಳನ್ನು ಪ್ರತೀ ತಿಂಗಳಿಗೊಮ್ಮೆ ಬೋಧಿಸಬೇಕು.

ಅರಣ್ಯದ ಅಂಚಿನಲ್ಲಿ ಕೆಲವು ತೋಟಗಳಲ್ಲಿ, ಕೃಷಿ ಭೂಮಿಗಳಲ್ಲಿ ಅಥವಾ ಕಟ್ಟಡದ ಮೇಲ್ಛಾವಣಿಯ ಮೇಲೆ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗಾವಹಿಸಿ, ಅನಿರೀಕ್ಷಿತ ಭೇಟಿಗಳನ್ನು ಅಂತಹ ಅನುಮಾನದ ಸ್ಥಳಗಳ ವೀಕ್ಷಣೆ ಮಾಡಬೇಕು. ಈ ಬಗ್ಗೆ ವರದಿಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಮಾದಕ ದ್ರವ್ಯ ವಸ್ತುಗಳು ಮೆಡಿಸಿನ್ ಹಾಗೂ ಚಿಕ್ಕ ಪಾರ್ಸೆಲ್‌ನಲ್ಲಿ ಅಂಚೆ ಮೂಲಕ ಸಾಗಾಟವಾಗುತ್ತಿದ್ದು, ಅಂಚೆ ಇಲಾಖೆಯವರು ಈ ಬಗ್ಗೆ ಅನುಮಾನ ಬಂದಂತಹ ಪಾರ್ಸೆಲ್‌ಗಳನ್ನು ವಾರಸುದಾರರ ಸಮ್ಮುಖದಲ್ಲಿ ತೆರೆದು ನೋಡಿ, ವಾರಸುದಾರರಿಗೆ ಹಸ್ತಾಂತರಿಸುವುದು ಸೂಕ್ತ ಎಂದು ಸೂಚನೆ ನೀಡಿದರು.

 ಜಿಲ್ಲೆಯಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಹಾಗೂ ಮುಖಂಡರ ಜೊತೆ ಕಾರ್ಮಿಕ ಇಲಾಖಾ ಅಧಿಕಾರಿಗಳು ಸಭೆ ಮತ್ತು ಕಾರ್ಯಾಗಾರಗಳನ್ನು ನಡೆಸಿ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಅನಧೀಕೃತವಾಗಿ ಆಗ್ಗಿಂದಾಗೆ ಗೈರು  ಆಗುವುದು ಕಂಡು ಬಂದಲ್ಲಿ ಅವರ ಪೋಷಕರುಗಳಿಗೆ ತಿಳಿಸುವುದರ ಜೊತೆಗೆ ಶಾಲಾ ಶಿಕ್ಷಕರು ಅವರ ಚಲನ ವಲನಗಳ ಬಗ್ಗೆ ಗಂಭೀರವಾಗಿ ವೀಕ್ಷಣೆ ಮಾಡಬೇಕು ಒಂದೊಮ್ಮೆ ವ್ಯಸನಕ್ಕೆ ಗುರಿಯಾಗಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಮಾಡುವುದರೊಂದಿಗೆ ಅವರ ಮನ ಪರಿವರ್ತನೆಗೆ ಮುಂದಾಗಬೇಕು ಎಂದರು.

ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿ.ಸಿ.ಟಿ.ವಿ ಆಳವಡಿಸುವುದು ಕಡ್ಡಾಯ ಎಂದ ಅವರು ಯುವಜನರು ಮಾದಕ ವ್ಯಸನದ ಪರೀಕ್ಷೆ ಮಾಡಿದ ಸಂದರ್ಭದಲ್ಲಿ 97 ಜನರು ಮಾದಕ ವ್ಯಸನ ಮಾಡಿರುವುದು ಕಂಡುಬಂದಿದೆ, ಇವರಲ್ಲಿ 90 ಜನರು ಮಣಿಪಾಲ ಭಾಗದವರೆ ಆಗಿದ್ದಾರೆ ಉಳಿದ 7 ಜನರು ಇತರೆ ಭಾಗದವರಾಗಿದ್ದು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಇಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಅವರನ್ನು ಶಿಕ್ಷಣ ಸಂಸ್ಥೆಯಿಂದ ಹೊರಗಿಡುವುದು ಸೂಕ್ತ ಎಂದರು.   

  ಉತ್ತರದಿಂದ ಹೆಚ್ಚಾಗಿ ಕೂಲಿ ಕಾರ್ಮಿಕರು ಜಿಲ್ಲೆಗೆ ರೈಲುಗಳ ಮೂಲಕ ಆಗಮಿಸುತ್ತಾರೆ. ರೈಲ್ವೆ ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳನ್ನು ತಂದಿರುವ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಂತಹವರ ಬ್ಯಾಗ್‌ಗಳನ್ನು ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಸರ್ಜನ್ ಡಾ. ಅಶೋಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version