Kundapra.com ಕುಂದಾಪ್ರ ಡಾಟ್ ಕಾಂ

ಹಕ್ಲಾಡಿ ಸೂರಪ್ಪ ಶೆಟ್ಟಿ ಪ್ರೌಢಶಾಲೆ ಸುವರ್ಣೋತ್ಸವಕ್ಕೆ ಭರದ ಸಿದ್ದತೆ

ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾದೇಗುಲ ಹಕ್ಲಾಡಿ ಸೂರಪ್ಪ ಶೆಟ್ಟಿ ಪ್ರೌಢಶಾಲೆ ಸುವರ್ಣ ಮಹೋತ್ಸವ ತಯಾರಿ ಭರದಿಂದ ಸಾಗುತ್ತಿದ್ದು, ಅದಕ್ಕಾಗಿ 21 ವಿವಿಧ ಸಮಿತಿಗಳ ರಚನೆ ಮಾಡಲಾಗಿದೆ. ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಮಾಡಲಾಗಿದೆ. ಸಮಿತಿ ಮೇಲುಸ್ತ್ತುವಾರಿಯಲ್ಲಿ ಎಲ್ಲಾ ಕಾರ‍್ಯಕ್ರಮಗಳ ಸಿದ್ಧತೆ ಭರದಿಂದ ಸಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ‍್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಹಕ್ಲಾಡಿ ಸೂರಪ್ಪ ಶೆಟ್ಟಿ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ, ಎರಡು ದಿನ ನಡೆಯುವ ಕಾರ‍್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಊಟೋಪಚಾರ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಲು ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಹಕ್ಲಾಡಿ ಪ್ರೌಢಶಾಲೆ ಶಿಕ್ಷಣ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ. ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ಶಾಲೆ ಅಡಿಗಲ್ಲು ಹಾಕಿದೆ. ಹಳೆ ವಿದ್ಯಾರ್ಥಿಗಳು ಮತ್ತು ಊರವರ ಸಹಕಾರದಲ್ಲಿ ದಾನಿಗಳ ನೆರವಿನಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತದೆ ಎಂದು ಹೇಳಿದರು.

ಹಕ್ಲಾಡಿ ಗ್ರಾಪಂ. ಅಧ್ಯಕ್ಷೆ ಮಾಲತಿ ಶೆಟ್ಟಿ, ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಶಾಲಾಭಿವೃದ್ಧಿ ಸಮಿತಿ ಸದಸ್ಯ ನಿವೃತ್ತ ಮುಖ್ಯಶಿಕ್ಷಕ ರಾಜೀವ ಶೆಟ್ಟಿ, ಕುಂದಬಾರಂದಡಿ ಸೂರ ಮೊಗವೀರ, ನಿವೃತ್ತ ವಿಜಯಾ ಬ್ಯಾಂಕ್ ಅಧಿಕಾರಿಗಳಾದ ಶರತ್ ಕುಮಾರ್ ಶೆಟ್ಟಿ ನೂಜಾಡಿ, ರತ್ನಾಕರ ಶೆಟ್ಟಿ, ಮಾಜಿ ಗ್ರಾಪಂ ಸದಸ್ಯ ಜೋಗ ಬಿಲ್ಲವ, ಹಕ್ಲಾಡಿ ಗ್ರಾಪಂ. ಸದಸ್ಯರಾದ ಕಿಶೋರ್ ಕುಮಾರ್, ಸತೀಶ್ ಶೆಟ್ಟಿ ಗುಬ್ಯಾಡಿ, ಸುಭಾಸ್ ಭಂಡಾರಿ, ಸಮಾಜ ಸೇವಕ ರಘುರಾಮ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರ ರಾಜೀವ ಶೆಟ್ಟಿ ಹಕ್ಲಾಡಿ, ಮಾಜಿ ಗ್ರಾಪಂ. ಅಧ್ಯಕ್ಷ ಗಣಪಯ್ಯ ಶೆಟ್ಟಿ, ಶಿಕ್ಷಕರಾದ ಸುಜಾತಾ, ಚೇತನಾ, ಪ್ರತಿಭಾ, ವಸುಧಾ ಇದ್ದರು.

* ಸುವರ್ಣ ಸಂಭ್ರಮ ನೆನಪಲ್ಲಿ ಉಳಿಯುವಂತೆ ಮಾಡುವ ಉದ್ದೇಶದಿಂದ ಶಾಲಾ ಪ್ರವೇಶದಲ್ಲಿ ಸ್ವಾಗತ ಕಮಾನು ರಚನೆ ಪ್ರಕ್ರಿಯೆ ಚಾಲನೆಯಲ್ಲಿದೆ. ಶಾಲಾ ಪ್ರವೇಶ ರಸ್ತೆ ಸರ್ವಋತು ರಸ್ತೆಯಾಗಿ ಮಾಡಲಾಗುತ್ತದೆ. ಶಾಲಾ ಸುತ್ತಾ ಕಂಪೌಂಡ್ ರಚನೆ ಪ್ರಕ್ರಿಯೆಯಲ್ಲಿದೆ. ಹಕ್ಲಾಡಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿದ್ದು, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಳೆ ವಿದ್ಯಾರ್ಥಿಗಳ ಪ್ರೋತ್ಸಾವ, ಊರು ಜನರ ಸಹಕಾರದಲ್ಲಿ ಅದ್ದೋರಿ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ‍್ಯಕ್ರಮ ಸಾಂಗವಾಗಿ ನಡೆಸಲಾಗುತ್ತದೆ. – ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ, ಕುಂದಾಪುರ ತಾಪಂ.

* ಹಕ್ಲಾಡಿ ಪ್ರೌಢಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಗೌರವಿಸುವ ನಿಟ್ಟಲ್ಲಿ ಸಮಿತಿ ರಚಿಸಲಾಗಿದ್ದು, ಅವರನ್ನು ಗೌರವಿಸಿ ಸುವರ್ಣ ಸಂಭ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಡಿ.೫ ಮತ್ತು ೬ ರಂದು ಸುವರ್ಣ ಸಂಭ್ರಮ ನಡೆಯಲಿದ್ದು, ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹಾಗೂ ವಿವಿಧ ಮಾಹಿತಿ ಶಿಬಿರ ನಡೆಸಲಾಗುತ್ತದೆ. ಸಾಂಸ್ಕೃತಿ ವೈಭವದ ಹಿನ್ನೆಲೆಯಲ್ಲಿ ಮೂಡುಬಿದ್ರ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ಡಿ.೬ ರಂದು ನಡೆಯಲಿದೆ. ನಭೂತೋ, ನಭವಿಷ್ಯತಿ ಎಂಬ ರೀತಿ ಸುವರ್ಣ ಸಂಭ್ರಮ ಆಚರಣೆ ಭೂರ್ವಬಾವಿ ತಯಾರಿ ಭರದಸಿದ್ದತೆಯಲ್ಲಿ ವಿವಿಧ ಸಮಿತಿ ತೊಡಗಿಕೊಂಡಿದೆ.  – ಕಿಶೋರ್ ಕುಮಾರ್, ಪ್ರಭಾರ ಮುಖ್ಯಶಿಕ್ಷಕ, ಸೂರಪ್ಪ ಶೆಟ್ಟಿ ಪ್ರೌಢಶಾಲೆ ಹಕ್ಲಾಡಿ

Exit mobile version