ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಹಿಳೆಯರು ಮತ್ತು ಗರ್ಭಿಣಿಯರಲ್ಲಿ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಬೇಕಾಗಿದೆ. ತರಕಾರಿ, ಧಾನ್ಯಗಳು, ಸೊಪ್ಪು ಮತ್ತಿತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಹೆಚ್ಚೆಚ್ಚು ಬಳಸಬೇಕು. ಮಹಿಳೆಯರು ತನ್ನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಮಹಿಳೆ ತನ್ನ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಪೌಷ್ಠಿಕ ಆಹಾರ ಸೇವೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ ಕೋಟ್ಯಾನ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಮ ಪಂಚಾಯತ್ ಗಂಗೊಳ್ಳಿ, ಗ್ರಾಮ ಪಂಚಾಯತ್ ಹೊಸಾಡು, ಗ್ರಾಮ ಪಂಚಾಯತ್ ಗುಜ್ಜಾಡಿ, ರೋಟರಿ ಕ್ಲಬ್ ಗಂಗೊಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಮಾರಿಕಾಂಬಾ ಮಹಿಳಾ ಸಹಕಾರ ಸಂಘ ಕೊಡಪಾಡಿ – ಗುಜ್ಜಾಡಿ ಮತ್ತು ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸೀತಾರಾಮಚಂದ್ರ ಸಭಾ ಭವನದಲ್ಲಿ ಸೋಮವಾರ ಜರಗಿದ ಪೌಷ್ಠಿಕ ಮಾಸಾಚರಣೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಗ್ರಾಪಂ ಲೆಕ್ಕ ಸಹಾಯಕ ಶೇಖರ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಗುಜ್ಜಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿತಾ, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಎಸ್. ತಾಂಡೇಲ, ಮಾರಿಕಾಂಬಾ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ರತ್ನ ಟಿ. ದೇವಾಡಿಗ, ಸೀತಾರಾಮಚಂದ್ರ ದೇವಸ್ಥಾನದ ರಾಜಗೋಪಾಲ ಶೇರುಗಾರ್, ಸಿಎಚ್‌ಒ ನಯನಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಬೆಣ್ಗೆರೆ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಮಂಕಿ ಅಂಗನವಾಡಿ ಕಾರ್ಯಕರ್ತೆ ದಿವ್ಯಾ ವಂದಿಸಿದರು.