Kundapra.com ಕುಂದಾಪ್ರ ಡಾಟ್ ಕಾಂ

ಭಾಷೆ, ಸಂಸ್ಕೃತಿ ಅಧ್ಯಯನಕ್ಕೂ ಆದ್ಯತೆ ನೀಡಿ: ಕೆ. ಆರ್. ನಾಯ್ಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳಿಂದು ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಒತ್ತಡ ಬಹಳ ಇರುತ್ತದೆ. ಆದರೆ ಪಾಠದ ಅಧ್ಯಯನದೊಂದಿಗೆ ಪಾಠೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆ. ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದರೊಂದಿಗೆ ಆದಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನುಭವದ ವಿಕಾಸ ಮಾಡಿಕೊಳ್ಳಬೇಕು. ಕುಂದಾಪ್ರ ಕನ್ನಡದಲ್ಲಿ ಕವನ ಬರೆದ ಹಾಗೂ ಹಾಡುಗಳನ್ನು ಹಾಡಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಖ್ಯಾತ ಸಾಮಾಜಿಕ ಧುರೀಣ, ಸುಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್. ನಾಯ್ಕ್ ಹೇಳಿದರು.

ಭಂಡಾರ್ಕಾರ್ಸ್‌ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಹಾಗೂ ’ಕುಂದಪ್ರಭ’ ಸಂಸ್ಥೆ ಆಯೋಜಿಸಿದ ಕುಂದಾಪ್ರ ಕನ್ನಡ ಸ್ವರಚಿತ ಕವನ ವಾಚನ, ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಭಂಡಾರ್ಕಾರ್ಸ್‌ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಬಹುಮಾನ ವಿತರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಶ್ವಸ್ಥರಾದ ರಾಜೇಂದ್ರ ತೋಳಾರ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಭಂಡಾಕಾರ್ಸ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ, ’ಭಾರತದ ಉತ್ತಮ ಪ್ರಜೆಗಳಾಗಿ, ಸಾಧಕರಾಗಲು ವಿದ್ಯಾರ್ಥಿಗಳು ಜ್ಞಾನ ವೃದ್ಧಿ ಮಾಡಿಕೊಳ್ಳುವುದು, ತಮ್ಮ ಪ್ರತಿಭೆಗಳನ್ನು ಬೆಳಗಿಸಲು ಇತರರೊಂದಿಗೆ ಬೆರೆತು ಅರಿತುಕೊಳ್ಳುವುದು ಬಹಳ ಮುಖ್ಯ.’ ಎಂದು ಹೇಳಿದರು.

‘ಕುಂದಪ್ರಭ’ ಸಂಸ್ಥೆಯ ಯು. ಎಸ್. ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದ್ಯಮಿ, ದಾನಿ ದತ್ತಾನಂದ ಗಂಗೊಳ್ಳಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಭಂಡಾರ್ಕಾರ್ಸ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಮಲತಾ ಉಪಸ್ಥಿತರಿದ್ದರು.

ರೇಡಿಯೋ ಕುಂದಾಪ್ರ 89.6 ಸಂಯೋಜಕಿ ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು. ಯುಕ್ತಾ ಹೊಳ್ಳ ಕುಂದಾಪ್ರ ಕನ್ನಡ ಹಾಡು ಹಾಡಿದರು. ಹಂದಕುಂದ ಸೋಮಶೇಖರ ಶೆಟ್ಟಿ ವಂದಿಸಿದರು.

Exit mobile version