Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು – ತಿಮ್ಮಪ್ಪ ಗಾಣಿಗ

ಬೈಂದೂರು: ಹಿರಿಯರನ್ನು ಗೌರವಿಸುವುದು ನಮ್ಮ ಮಣ್ಣಿನ ಗುಣ ಹಾಗೂ ನಾಡಿನ ಸಂಸ್ಕೃತಿ. ಇದರಿಂದ ನಮ್ಮನ್ನ ನಾವು ಗೌರವಿಸಿಕೊಂಡಂತೆ. ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಶಿಕ್ಷಕ ತಿಮ್ಮಪ್ಪ ಗಾಣಿಗ ಹೇಳಿದರು.

ಬೈಂದೂರು ಶಾಸಕರ ಮಾದರಿ ಸರಕಾರಿ ಶಾಲೆಯಲ್ಲಿ ನೆಹರೂ ಜನ್ಮದಿನಾಚರಣೆಯ ಅಂಗವಾಗಿ ನಡೆದ ಶಾಲೆಯ ಎಲ್ಲಾ 251 ಮಕ್ಕಳ ಸಾಮೂಹಿಕ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಮೊದಲ ಪ್ರಧಾನಿ ಮಕ್ಕಳ ಪ್ರೀತಿಯ ಚಾಚಾನೆಹರು ಅವರ ಅಪೇಕ್ಷೆಯಂತೆ ಮಕ್ಕಳು ದೇವರಿಗೆ ಸಮಾನ ಎಂಬ ನೆಲೆಯಲ್ಲಿ ನ.14 ಮಕ್ಕಳ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಮಕ್ಕಳಲ್ಲಿ ಬಡವ-ಬಲ್ಲಿದ, ಜಾತಿ-ಧರ್ಮಗಳ ಭೇಧವಿರಬಾರದು. ಪರಿಸರ, ಸಹವಾಸಗಳಿಂದ ಮಕ್ಕಳು ಕೆಟ್ಟವಿಚಾರಗಳನ್ನು ಕಲಿಯದಂತೆ ಪಾಲಕರು ಎಚ್ಚರವಹಿಸಬೇಕು. ಮಕ್ಕಳಿಗೆ ಎಳೆವೆಯಲ್ಲಿ ಸ್ವಾರ್ಥಬುದ್ಧಿ ಕಲಿಸಿದರೆ ಮುಂದೆ ಅದು ಹೆಮ್ಮರವಾಗುವುದು. ಆದ್ದರಿಂದ ಮನೆಯಿಂದಲೆ ವಿದ್ಯಾರ್ಥಿಗಳಿಗೆ ಜೀವನದ ಪಾಠ ಆರಂಭಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಅತೀಕಿರಿಯ ವಯಸ್ಸಿನ ಅಭಿರಾಮ್ ಹಾಗೂ ಮಹಿಮ್ ಸಾಂಕೇತಿಕವಾಗಿ 21 ದೀಪ ಬೆಳಗಿದರು. ಪುಟಾಣಿ ಕೃಷಿಕ್ ಕೇಕ್ ತುಂಡರಿಸಿದರು. ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಕ್ಕಳು ಪರಸ್ಪರ ಸಿಹಿತಿಂಡಿ ವಿನಿಮಯ ಮಾಡಿಕೊಂಡು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಮುಖ್ಯಶಿಕ್ಷಕ ಜನಾರ್ದನ ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು. ಶಿಕ್ಷಕಿಯರಾದ ವೀಣಾ ಹೆಗಡೆ, ಅನ್ನಪೂರ್ಣೆಶ್ವರಿ, ವಿದ್ಯಾರ್ಥಿ ನಾಯಕಿ ರಂಜೀತಾ ಉಪಸ್ಥಿತರಿದ್ದರು.

Exit mobile version