ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ನಾಡದೋಣಿ ಮೀನುಗಾರ ಸಂಘಟನೆಗಳ ಮನವಿಯ ಮೇರೆಗೆ ಮೀನು ಮರಿ ಸಂತತಿಗಳ ನಾಶಕ್ಕೆ ಕಾರಣವಾಗಿರುವ ನಿಷೇಧಿತ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನಿಯಂತ್ರಿಸುವ ಬಗ್ಗೆ ಜಿಲ್ಲಾಕಾರಿ ಡಾ. ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಮೀನುಗಾರ ಮುಖಂಡರ ಸಭೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠರು, ಕರಾವಳಿ ಕಾವಲು ಪಡೆಯ ಪೋಲಿಸ್ ಅಧಿಕ್ಷಕರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಉಡುಪಿ ಜಿಲ್ಲೆಯ ವಿವಿಧ ರೀತಿಯ ಟ್ರಾಲ್‌ಬೋಟ್ ಸಂಘಟನೆಗಳು, ಪರ್ಸಿನ ಬೋಟ್ ಸಂಘಟನೆಗಳು ಹಾಗೂ ನಾಡದೋಣಿ ಮೀನುಗಾರರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

ನಿಷೇಧಿತ ಬುಲ್‌ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯಿಂದ ಮೀನುಮರಿ ಸಂತತಿಗಳು ನಾಶವಾಗುವುದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ ಜಿಲ್ಲಾಧಿಕಾರಿಗಳು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಿಷೇಧಿತ ಮೀನುಗಾರಿಕೆಯ ಬಗ್ಗೆ ಇರುವ ಕಾನೂನು ಆದೇಶವವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ನಿಷೇಧಿತ ಬುಲ್‌ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯ ಬಗ್ಗೆ ಇರುವ ಕಾನೂನನ್ನು ಉಲ್ಲಂಘಿಸಿದ ಯಾಂತ್ರೀಕೃತ ಬೋಟ್‌ನವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಂತಹ ಬೋಟುಗಳನ್ನು ಮುಟ್ಟುಗೋಲು ಹಾಕಿ, ಬೋಟಿನ ನೊಂದಾವಣೆಯನ್ನು ರದ್ದುಗೊಳಿಸುವುದಲ್ಲದೇ, ಅವರ ಮೀನನ್ನು ಏಲಂ ಮಾಡಿ ಅದರ ಐದು ಪಟ್ಟು ದಂಡವನ್ನು ವಿಧಿಸಲಾಗುವುದು ಎಂದು ಜಿಲ್ಲಾಕಾರಿಗಳು ಆದೇಶಿಸಿದರು.
ಈ ಆದೇಶ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲುಪಡೆಯ ಪೊಲೀಸರಿಗೆ ಸೂಚನೆ ನೀಡಿದರು.