ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಡಂಚಿನ ಜನವಸತಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಹಾಗೂ ವಿಶೇಷ ಅಧ್ಯಯನ/ ಸಂಶೋಧನೆಗಾಗಿ ಕಾನೂನು ತಜ್ಞರನ್ನು ಒಳಗೊಂಡ ಬೈಂದೂರು ಫೌಂಡೇಷನ್ ರೂಪಿಸಲಾಗಿದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.
ಕಸ್ತೂರಿ ರಂಗನ್ ವರದಿ ವಿರುದ್ಧ ಮುಂದಿನ ಹಂತದ ಹೋರಾಟಗಳ ಕುರಿತು ಸಂತ್ರಸ್ತರಾಗಿರುವ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಸಭೆಯನ್ನು ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್‌ನಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನಾತ್ಮಕ ಹೋರಾಟವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೈಂದೂರು ಫೌಂಡೇಶನ್ ಸ್ಥಾಪಿಸಲಾಗಿದೆ. ಅಧ್ಯಯನದ ಜತೆಗೆ ಹೋರಾಟದ ಮುಂದಿನ ರೂಪುರೇಷೆಯನ್ನು ಫೌಂಡೇಶನ್ ಸಿದ್ಧಪಡಿಸಲಿದೆ ಎಂದರು.
ಕಸ್ತೂರಿ ರಂಗನ್ ವರದಿ 2013ರಲ್ಲಿ ಘೋಷಣೆಯಾದರೂ ಈ ತನಕ ಯಾರೂ ಕೂಡ ಅಧ್ಯಯನಾತ್ಮಕ ಹೋರಾಟ ಮಾಡಿದವರಿಲ್ಲ. ಕಾಲಕಾಲಕ್ಕೆ ಹೋರಾಟಗಳು ಆದಾಗಲೂ, ಹೋರಾಟಗಾರರನ್ನು ದಿಕ್ಕು ತಪ್ಪಿಸುವ ಕೆಲಸವೂ ಆಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ.
ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದರೆ ಆಗುವ ಅನಾನುಕೂಲಗಳನ್ನು ಕೋರ್ಟಿಗೆ ತಿಳಿಸಬೇಕಿದೆ. ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಬೇಕಾದರೆ, ಸಂಘಟನಾತ್ಮಕ ಕಾನೂನಿನ ಉತ್ತರ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಬೈಂದೂರು ಫೌಂಡೇಶನ್ ಸ್ಥಾಪನೆ ಮಾಡುವುದಾಗಿ ಘೋಷಿಸಿದರು. ವಕೀಲರಾದ ವಿಶ್ವನಾಥ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಮತ್ತು ರವಿಚಂದ್ರ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದರು.
ಶೀಘ್ರದಲ್ಲಿ ಕುಂದಾಪುರ ತಾಲೂಕು ಕೇಂದ್ರದಲ್ಲಿ ಪ್ರತಿಭಟಿಸುವುದು, ಮ್ಯಾನುವೆಲ್ ಸರ್ವೆ ನಡೆಸುವ ಮೂಲಕ ಕೇರಳದಂತೆ, ನಮ್ಮ ರಾಜ್ಯದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಭೆಯಲ್ಲಿ ಹಿರಿಯ ಹೋರಾಟಗಾರಾದ ಡಾ.ಅತುಲ್ ಕುಮಾರ್ ಶೆಟ್ಟಿ ಅವರ ಸಹಿತ ಅನೇಕ ಹೋರಾಟಗಾರರು ಭಾಗವಹಿಸಿದ್ದರು.

