Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಿ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದು, ಮುಂದಿನ ಪೀಳಿಗೆಗೆ ಮಾತೃಭಾಷೆಯ ಮಹತ್ವದ ಕುರಿತು ಮನದಟ್ಟು ಮಾಡುವ ಮೂಲಕ ಕನ್ನಡವನ್ನು ನಮ್ಮ ಉಸಿರಾಗಿಸುವುದರ ಜೊತೆಗೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಡಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಿ, ಕನ್ನಡ ತಾಯಿ ಭುನೇಶ್ವರಿಯ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆ, ರಾಜ್ಯ ಸರ್ಕಾರವು ಕರ್ನಾಟಕ ಸಂಭ್ರಮ-50 ಅನ್ನು ಆಚರಿಸುತ್ತಿದ್ದು, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಡಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಮನೆಯಲ್ಲಿ ಮಾತೃ ಭಾಷೆಯಾದ ಕನ್ನಡವನ್ನು ಮಾತನಾಡುವುದರೊಂದಿಗೆ, ಮಕ್ಕಳು ಕನ್ನಡ ಪುಸಕ್ತಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಕನ್ನಡ ಮಾತೃ ಭಾಷೆಯನ್ನು ಕಲಿಕಾ ಮಾಧ್ಯಮವಾಗಿಸಿದಾಗ ಮಾತ್ರವೇ ಕನ್ನಡ ಜ್ಯೋತಿ ರಥಯಾತ್ರೆಗೆ ಸಾರ್ಥಕತೆ ದೊರೆಯುತ್ತದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ್ ಕುಂದರ್ ಮಾತನಾಡಿ, ಕನ್ನಡ ಸಾಹಿತ್ಯವನ್ನು, ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯವಾಗಬೇಕು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವುದರೊಂದಿಗೆ ಯುವಜನತೆಯಲ್ಲಿ ಕನ್ನಡ ಕಲಿಯುವಿಕೆಯ ಕುರಿತ ಆಸಕ್ತಿಯನ್ನು ಹೆಚ್ಚಿಸಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎಎಸ್‌ಪಿ ಸಿದ್ದಲಿಂಗಪ್ಪ ಟಿ, ಪೌರಾಯುಕ್ತ ರಾಯಪ್ಪ, ಡಿಡಿಪಿಐ ಗಣಪತಿ ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕನ್ನಡ ಪರ ಘೋಷಣೆಗಳನ್ನು ಕೂಗುವುದರೊಂದಿಗೆ ಮೆರವಣಿಗೆ ಸಾಗಿತು. ರಥಯಾತ್ರೆಗೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ ಮೆರುಗು ನೀಡಿದವು.

Exit mobile version