Kundapra.com ಕುಂದಾಪ್ರ ಡಾಟ್ ಕಾಂ

ತಿರುಪತಿಗೆ ಮಾರ್ಗವಾಗಿ ತೆರಳುವ ಕಾಚಿಗುಡ – ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಸೇವೆ ಮುರ್ಡೇಶ್ವರದ ತನಕ ವಿಸ್ತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಿರುಪತಿಗೆ ನೇರ ರೈಲು ಸೇವೆ ಬೇಕೆಂಬ ದಶಕಗಳ ಕನಸು ನನಸಾಗಿದ್ದು, ವಾರಕ್ಕೆರಡು ದಿನವಿರುವ ಕಾಚಿಗುಡ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲನ್ನು ಮುರುಡೇಶ್ವರದ ತನಕ ವಿಸ್ತರಿಸಲಾಗಿದೆ. ಪ್ರತಿ ಬುಧವಾರ ಮತ್ತು ಶನಿವಾರ ಸಂಜೆ 4 ಗಂಟೆಗೆ ಬೈಂದೂರು ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ 11 ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.

ವಾರದಲ್ಲಿ 2 ದಿನ ಸಂಚರಿಸುವ ಕಾಚಿಗುಡ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲು ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6-05ಕ್ಕೆ ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣಕ್ಕೆ ಸಂಜೆ 4-45ಕ್ಕೆ ತಲುಪಿ ಅಲ್ಲಿಂದ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಬುಧವಾರ ಮತ್ತು ಗುರುವಾರ ಬೆಳಿಗ್ಗೆ 9-30ಕ್ಕೆ ತಲುಪುತ್ತಿತ್ತು. ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ರಾತ್ರಿ 8-05ಕ್ಕೆ ಹೊರಟು ಮರುದಿನ ಬೆಳಿಗ್ಗೆ 11-45ಕ್ಕೆ ತಿರುಪತಿಯ ರೇಣಿಗುಂಟ ನಿಲ್ದಾಣ ತಲುಪುತ್ತಿತ್ತು. ಇದೀಗ ಕಾಚಿಗುಡ – ಮಂಗಳೂರು ಸೆಂಟ್ರಲ್ ರೈಲನ್ನು (12789 / 12790) ಮುರುಡೇಶ್ವರ ತನಕ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ವಿಸ್ತರಣೆಗೆ ಆದೇಶ ಮಾಡಿದೆ.

ಕಳೆದ ಒಂದು ದಶಕದಿಂದ ಕುಂದಾಪುರ ರೈಲು ಸಮಿತಿಯು ಈ ಬಗ್ಗೆ ನಿರಂತರ ಪ್ರಯತ್ನಿಸುತಿದ್ದ ಹಿನ್ನೆಲೆಯಲ್ಲಿ ಸಂಸದನಾಗಿ ಆಯ್ಕೆಯಾದ ಮೊದಲ ನೂರು ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಈ ಮಹತ್ವಾಕಾಂಕ್ಷೆಯ ರೈಲು ಸೇವೆಯ ಗುರಿಯನ್ನು ಹೊಂದಿರುವುದಾಗಿ ಸಂಸದರು ತಿಳಿಸಿದ್ದರು. ಅದರಂತೆ ಮುರುಡೇಶ್ವರದ ಮೂಲಕ ಕುಂದಾಪುರ ಉಡುಪಿ ಸುರತ್ಕಲ್ ಮೂಲ್ಕಿ ನಗರಗಳು ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮಿಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್ ತನಕ ರೈಲು ಸಂಪರ್ಕ ಪಡೆದಿವೆ.

ಪುಣ್ಯಕ್ಷೇತ್ರಗಳಿಗೆ ರೈಲು ಸೇವೆ: ಸಂಸದ ಶ್ರೀನಿವಾಸ್ ಪೂಜಾರಿ ಸಂತಸ
ಕರಾವಳಿಯ ಪ್ರತೀ ಮನೆಯಿಂದಲೂ ತಿರುಪತಿ ತೆರಳುವ ಅಸಂಖ್ಯಾತ ಭಕ್ತವರ್ಗವಿದ್ದು, ರೈಲಿನ ಅಲಭ್ಯತೆಯ ಕಾರಣದಿಂದ ಬಸ್ ಅಥವಾ ಬೆಂಗಳೂರು ತಲುಪಿ ಅಲ್ಲಿಂದ ಪ್ರಯಾಣ ಮಾಡಬೇಕಾದ ಸ್ಥಿತಿ ಇತ್ತು. ದಕ್ಷಿಣದ ಎಲ್ಲಾ ರಾಜ್ಯಗಳ ಜತೆ ಕೊಂಕಣ ರೈಲ್ವೆ ಮೂಲಕ ರೈಲು ಸಂಪರ್ಕ ಲಭಿಸಿದ್ದು, ಪುಣ್ಯಕ್ಷೇತ್ರ ತಿರುಪತಿ ಹಾಗೂ ಉಡುಪಿ ಶ್ರೀಕೃಷ್ಣ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಮೂಲಕ ಮುರುಡೇಶ್ವರದವರೆಗೆ ವಿವಿಧ ಪುಣ್ಯಸ್ಥಳಗಳಿಗೆ ತೆರಳಲು ರೈಲು ಸೇವೆ ದೊರೆತಂತಾಗಿದೆ ಎಂದು ಸಂಸದ ಶ್ರೀನಿವಾಸ್ ಪೂಜಾರಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಅತ್ಯಂತ ಕ್ಷಿಪ್ರವಾಗಿ ಮನವಿಗೆ ಸ್ಪಂದಿಸಿದ ಭಾರತೀಯ ರೈಲ್ವೆಯ ಹಲವು ಅಧಿಕಾರಿಗಳಿಗೆ, ರಾಜ್ಯ ಸಚಿವ ಸೋಮಣ್ಣನವರಿಗೆ ಹಾಗು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಂಸದರು ಧನ್ಯವಾದ ತಿಳಿಸಿದ್ದಾರೆ.

* ತಿರುಪತಿ ಮತ್ತು ಕರಾವಳಿ ನಡುವೆ ರೈಲು ಬೇಕು ಎಂಬುದು ನಮ್ಮ ಹಲವು ದಶಕಗಳ ಪ್ರಯತ್ನ ವಾಗಿತ್ತು. ಸಂಸದ ಕೋಟ ಶ್ರಿನಿವಾಸ ಪೂಜಾರಿಯವರು ನಮ್ಮ ಬೇಡಿಕೆಯನ್ನು ಸಂಸದನಾದ ನೂರು ದಿನದಲ್ಲಿ ಈಡೇರಿಸುವ ಭರವಸೆ ನೀಡಿದ್ದರು ಮತ್ತು ಅದರಂತೆಯೇ ಇಂದು ತಿರುಪತಿಯ ಜತೆಗೇ ಉದ್ಯಮ ನಗರೀ ಹೈದರಾಬಾದ್ ಕೂಡ ಕರಾವಳಿಯ ಜತೆಗೆ ಬೆಸೆದಿದೆ. ವಾರಕ್ಕೊಂದು ದಿನ ಘೊಷಣೆಯಾಗಬೇಕಿದ್ದ ಹೊಸ ರೈಲಿನ ಬದಲು ವಾರಕ್ಕೆರಡು ದಿನದ ಕಾಚಿಗುಡ ರೈಲಿನ ವಿಸ್ತರಣೆ ಕೂಡ ಸಂಸದರ ಸಮರ್ಪಕ ನಡೆಯಾಗಿದ್ದು, ರೈಲು ಸೇವೆಗಳಲ್ಲಿ ಕ್ರಾಂತಿಕಾರ ಬದಲಾವಣೆಗೆ ಹೊರಟಿರುವ ಉಡುಪಿ ಸಂಸದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಕರಾವಳಿಯ ರೈಲು ಪ್ರಯಾಣಿಕರ ಪರವಾಗಿ ಅಭಿನಂದಿಸುತ್ತೇ‌ನೆ. – ಗಣೇಶ್‌ ಪುತ್ರನ್‌, ಅಧ್ಯಕ್ಷರು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ

Exit mobile version