Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ಶಾರದೋತ್ಸವ ಸಮಿತಿ: ಧಾರ್ಮಿಕ ಸಭಾ ಕಾರ್ಯಕ್ರಮ

oplus_0

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಧರ್ಮದ ಆಚರಣೆಯಲ್ಲಿ ವೈವಿಧ್ಯತೆ, ವ್ಯತ್ಯಾಸ ಇದ್ದರೂ ಧರ್ಮ ಎಂದೂ ಒಂದೇ. ಧರ್ಮದ ಆಚರಣೆ ಮಾಡದಿದ್ದವರು ನಾಸ್ತಿಕರು. ಜಗತ್ತಿನ ಸಾಮರಸ್ಯಕ್ಕೆ ಧರ್ಮ ಅವಶ್ಯಕ. ಧರ್ಮದ ಆಧಾರದಲ್ಲಿ ಇರುವುದರಿಂದಲೇ ಜಗತ್ತಿನಲ್ಲಿ ಸಹಬಾಳ್ವೆ, ವಿಶೇಷ ಬಾಂಧವ್ಯ, ಅಹಿಂಸೆ ನೋಡಬಹುದು. ಧರ್ಮದ ಅಡಿಯಲ್ಲಿ ನಡೆದಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ಧರ್ಮದ ಜಾಗೃತಿ ಆಗಬೇಕು, ಚಿಂತನೆಗಳು ನಡೆಯಬೇಕಿದೆ. ಧರ್ಮದ ಅರಿವು ಆಗಬೇಕು, ಹಿಂದು ಧರ್ಮದ ಪರಂಪರೆ, ಸಂಸ್ಕೃತಿಯನ್ನು ಬೆಳೆಸುವ ಕೈಂಕರ್ಯ ಆಗಬೇಕು. ಎಲ್ಲರೂ ಧರ್ಮದ ಆಚರಣೆ ಮಾಡುತ್ತಿರಬೇಕು ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಸ್ವಾಮಿಗಳು ಹೇಳಿದರು.

ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-2024ಅಂಗವಾಗಿ ಗಂಗೊಳ್ಳಿಯ ಸ. ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ವಿದ್ಯಾದೇವತೆಯಾಗಿರುವ ಶ್ರೀ ಶಾರದಾ ಮಾತೆಯ ವಿಶೇಷ ಉಪಾಸನೆಯನ್ನು ನವರಾತ್ರಿಯ ಪರ್ವಕಾಲದಲ್ಲಿ ಮಾಡುತ್ತಿರಬೇಕು. ಕಳೆದ ೪೯ ವರ್ಷಗಳಿಂದ ಗಂಗೊಳ್ಳಿಯಲ್ಲಿ ವಿಶೇಷವಾಗಿ ಶ್ರೀ ಶಾರದಾ ಮಹೋತ್ಸವವನ್ನು ಆಚರಿಸಿಕೊಂಡು, ಧರ್ಮ, ಸಂಸ್ಕೃತಿಯನ್ನು ಬೆಳೆಸುವ ಹಾಗೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಉತ್ತಮ ಕಾರ್ಯವನ್ನು ಮಾಡುತ್ತಿರುವ ಶ್ರೀ ಶಾರದೋತ್ಸವ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಆಶೀರ್ವದಿಸಿದರು.

ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಂ.ದೇವರಾಯ ಶೇರುಗಾರ್ ಸುವರ್ಣ ಸಂಚಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯು.ಎಸ್.ಶೆಣೈ, ಚಂದ್ರ ಗಂಗೊಳ್ಳಿ, ಕಿಶನ್ ಗಂಗೊಳ್ಳಿ, ಡಾ.ಗಣೇಶ ಗಂಗೊಳ್ಳಿ, ನಾಗರಾಜ ಖಾರ್ವಿ ಕಂಚುಗೋಡು, ದಿನೇಶ ಖಾರ್ವಿ ಲೈಟ್‌ಹೌಸ್, ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ.ಕುಂದರ್, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲದಾಸ, ಗಂಗೊಳ್ಳಿ ಪೇಟೆ ಶ್ರೀ ವಿಠಲ ರಕುಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ನರಸಿಂಹ ನಾಯಕ್, ಕುಂದಾಪುರ ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷ ಅಜಂತಾ ಖಾರ್ವಿ ಶುಭಾಶಂಸನೆಗೈದರು. ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಸಕ್ಲಾತಿ ಹಾಗೂ ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.

Exit mobile version