ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಳೆದ 49 ವರ್ಷಗಳಿಂದ ಗಂಗೊಳ್ಳಿಯಲ್ಲಿ ವಿಶೇಷವಾಗಿ ಶ್ರೀ ಶಾರದಾ ಮಹೋತ್ಸವವನ್ನು ಆಚರಿಸಿಕೊಂಡು ಧರ್ಮ, ಸಂಸ್ಕೃತಿಯನ್ನು ಬೆಳೆಸುವ ಕಾಯಕದ ಜೊತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಸಮಾಜಮುಖಿ ಕೆಲಸವನ್ನು ಶ್ರೀ ಶಾರದೋತ್ಸವ ಸಮಿತಿ ಮಾಡುತ್ತಿದ್ದು, ಸಮಿತಿಯ ವತಿಯಿಂದ ಸಾರ್ವಜನಿಕರಿಗೆ ಮಾಡಿದ ಉಪಕಾರ ಹಾಗೂ ಅದರಿಂದ ದೊರಕಿದ ಸ್ಪಂದನೆ ಅತ್ಯುತ್ತಮವಾಗಿದೆ ಎಂದು ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಕಾರ್ಯದರ್ಶಿ ಎಚ್. ಗಣೇಶ ಕಾಮತ್ ಹೇಳಿದರು.
ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-2024ರ ಅಂಗವಾಗಿ ಗಂಗೊಳ್ಳಿಯ ಸ. ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿಯ ಉದ್ಯಮಿ ಪದ್ಮನಾಭ ಕೊತ್ವಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಊರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಗೌರವಾಧ್ಯಕ್ಷ ನಿತಿನ್ ಖಾರ್ವಿ ಸ್ವಾಗತಿಸಿದರು. ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ. ಲಕ್ಷ್ಮೀಕಾಂತ ಮಡಿವಾಳ ಅತಿಥಿಗಳನ್ನು ಗೌರವಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಧರ ಎನ್. ಸಕ್ಲಾತಿ ವಂದಿಸಿದರು.

