ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯಿಂದಾಗಿ ನಮ್ಮ ಸಮುದಾಯ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದೆ. ಮರಾಟಿ ಸಮುದಾಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಶಿಕ್ಷಣ, ಆರೋಗ್ಯ ಹಾಗೂ ಸಂಘಟನೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಬೈಂದೂರು ವಲಯ ಮರಾಟಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭೋಜ ನಾಯ್ಕ್ ಹೇಳಿದರು.
ಅವರು ಗೋಳಿಹೊಳೆ ಮಹಿಷಾಮರ್ಧಿನಿ ಸಭಾಭವನದಲ್ಲಿ ಇತ್ತೀಚಿಗೆ ಜರುಗಿದ ಬೈಂದೂರು ವಲಯ ಮರಾಟಿ ಸಮಾಜ ಸುಧಾರಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಾಟಿ ಸಮುದಾಯದವರು ಸಂಘ ಸದಸ್ಯರಾಗುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಿಸುವ ಪ್ರಸ್ತಾಪವಿದ್ದು ಈ ಬಗ್ಗೆ ಕ್ರಮವಹಿಸಲಾಗುವುದು ಎಂದರು.
ಸಂಘದ ಗೌರವಾಧ್ಯಕ್ಷರಾದ ನಾರಾಯಣ ನಾಯ್ಕ್ ಬಾಚುಗುಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ದೇಶಕರುಗಳು ಉಪಸ್ಥಿತರಿದ್ದರು. ಈ ವೇಳೆ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್ ಜೋಗಿಜೆಡ್ಡು, ಯಕ್ಷಗಾನ ಕಲಾವಿದ ನಾರಾಯಣ ನಾಯ್ಕ್ ದೆಮ್ಮೇರಿ, ಮಾಜಿ ಅಧ್ಯಕ್ಷರಾದ ನಾರಾಯಣ ನಾಯ್ಕ್ ಬಾಚುಗುಳಿ ಹಾಗೂ ಸಮಾಜದ ಗುರಿಕಾರರನ್ನು ಸನ್ಮಾನಿಸಲಾಯಿತು.
ಜಯರಾಮ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಮುದೂರು ಸ್ವಾಗತಿಸಿ, ಶರತ್ಚಂದ್ರ ಬಾಚುಗುಳಿ ವಂದಿಸಿದರು. ಉದಯ ನಾಯ್ಕ್ ಹುಲ್ಕಡಿಕೆ ಕಾರ್ಯಕ್ರಮ ನಿರೂಪಿಸಿದರು.