Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಗೆ ರಾಜ್ಯಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಹಾಗೂ ಸೂರ್ಯಫೌಂಡೇಶನ್ ವತಿಯಿಂದ ಇಂಡೋಗ್ಲೋಬ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ 2024ನೇ ಸಾಲಿನ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಸಮ್ಮೇಳನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದಿರುವ ಶಾಲೆಯನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಾಲಿನಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿರುವ ಶಾಲೆಗೆ ನೀಡುವ  “ಶಿಕ್ಷಣ ಚೈತನ್ಯ ಪ್ರಶಸ್ತಿ – 2024″ಯು ಕುಂದಾಪುರದ ಯಡಾಡಿ – ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಗೆ ದೊರಕಿತು.

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮುನ್ನೆಡೆಸುವ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯು ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಭಿನ್ನ ಪ್ರಯತ್ನಗಳಿಂದ ಮಕ್ಕಳ ಆಸಕ್ತಿದಾಯಕ ಕಲಿಕೆಗೆ ಉತ್ತಮ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಸುಸಜ್ಜಿತ ಕಟ್ಟಡ, ಅನುಭವಿ ಕ್ರಿಯಾಶೀಲ ಶಿಕ್ಷಕ ವೃಂದ, ಕಲಿಕೆಗೆ ಪೂರಕವಾದ ವಾತಾವರಣ, ಚಟುವಟಿಕೆ ಆಧಾರಿತ ಕಲಿಕಾ ಕ್ರಮ, ಕ್ರೀಡಾ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ. ಪಠ್ಯೇತರ ಚಟುವಟಿಕೆಗಳಲ್ಲಿ ಕರಾಟೆ,ಚಿತ್ರಕಲೆ, ಸಂಗೀತ, ಯೋಗ, ತಬಲಾ, ಕೀ ಬೋರ್ಡ್, ಭರತನಾಟ್ಯ, ಚೆಸ್, ಅಬಾಕಾಸ್, ಚಂಡೆ, ಯಕ್ಷಗಾನ, ಇತ್ಯಾದಿ ಚಟುವಟಿಕೆಗಳು ಮಕ್ಕಳ ಉಲ್ಲಾಸದಾಯಕ ಕಲಿಕೆಗೆ ನೆರವಾಗಿ ಮಕ್ಕಳು ಕಲೆಯಲ್ಲಿ ಆಸಕ್ತಿಯನ್ನು ಹೊಂದಲು ಪೂರಕವಾಗಿದೆ.

ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಯನ್ನು ಸಂಸ್ಥೆ ಮಾಡುತ್ತಿದ್ದು ಕಳೆದ ಸಾಲಿನ  ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಮತ್ತು ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದು ಶಾಲೆಯ ಹೆಗ್ಗಳಿಕೆಯಾಗಿದೆ.

ಒಂದು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಒಳಗೊಂಡ ಸರ್ವಾಂಗೀಣ ಪ್ರಗತಿಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ನೀಡುವ ಪ್ರಶಸ್ತಿಯು ಕುಂದಾಪುರದ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಗೆ ಬಂದಿರುವುದು ಕುಂದಾಪುರ ತಾಲೂಕಿಗೆ ಒಂದು ಹೆಮ್ಮೆಯ ವಿಚಾರವಾಗಿದೆ.

Exit mobile version